ನಿಂದನೆ ಆರೋಪ: ಪೊಲೀಸರು-ದತ್ತಮಾಲಾಧಾರಿಗಳ ನಡುವೆ ಮಾತಿನ ಚಕಮಕಿ
ಮೂಡಿಗೆರೆ, ನ.1: ದತ್ತಮಾಲಾಧಾರಿಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆ ಎದುರು ದತ್ತಮಾಲಾಧಾರಿಗಳು ಜಮಾಯಿಸಿದ ಘಟನೆ ನಡೆದಿದೆ.
ಗುರುವಾರ ರಾತ್ರಿ 10 ಗಂಟೆ ಬಳಿಕ ದತ್ತಮಾಲಾಧಾರಿಗಳು ನಗರದ ಎಂಜಿ ರಸ್ತೆಯಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್ ಗಳನ್ನು ಕಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಯೋರ್ವರು ಯಾವುದೇ ರೀತಿಯ ಧ್ವಜಗಳನ್ನು ಕಟ್ಟದಂತೆ ನಿರ್ದೇಶನ ನೀಡಿದ್ದರು. ಬಳಿಕ ದತ್ತಮಾಲಾಧಾರಿಗಳು
"ಈ ಸ್ಥಳದಲ್ಲಿ ಬಂಟಿಂಗ್ಸ್ ಕಟ್ಟಲು ಅವಕಾಶ ಮಾಡಿಕೊಡಿ" ಎಂದು ಒತ್ತಾಯಿಸಿದಾಗ, ಮಾಲಾಧಾರಿಗಳ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಈ ವೇಳೆ ಪೊಲೀಸರು ದತ್ತಮಾಲಾಧಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಮಾಲಾಧಾರಿಗಳು ಆರೋಪಿಸಿ ಶುಕ್ರವಾರ ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದ ಸಮೀಪ ಸಭೆ ಸೇರಿ ಪೊಲೀಸ್ ಅಧಿಕಾರಿ ಕ್ಷಮೆ ಕೇಳಬೇಕು ಇಲ್ಲವೇ ಎಸ್ಪಿ ಸ್ಥಳಕ್ಕೆ ಬಂದು ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದರು.
ಮಾಲಾಧಾರಿಗಳು ಪೊಲೀಸ್ ಠಾಣೆ ಎದುರು ಜಮಾಯಿಸುತ್ತಿದ್ದಂತೆ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಗುಂಪು ಸೇರುವಂತಿಲ್ಲ. ಆದರೆ ಕಳೆದ ರಾತ್ರಿ ವೇಳೆ 50ಕ್ಕೂ ಹೆಚ್ಚು ಜನರು ಗುಂಪುಗೂಡಿದ್ದರಿಂದ ಕಾನೂನು ಸಮಸ್ಯೆ ಕಾಪಾಡುವ ದೃಷ್ಟಿಯಿಂದ ಎಚ್ಚರಿಕೆ ನೀಡಿರುವುದಾಗಿ ಹೇಳಿದರು. ಬಳಿಕ ದತ್ತ ಮಾಲಾಧಾರಿಗಳು ಸ್ಥಳದಿಂದ ತೆರಳಿದರು.
ಈ ಸಂದರ್ಭದಲ್ಲಿ ಬಜರಂಗದಳದ ಅವಿನಾಶ್, ಪ್ರತಾಪ್ ಶಟ್ಟಿ, ಸಚಿನ್, ಪುನಿತ್ ಕಡಿದಾಳ್, ಅರುಣ್ ಕುಂಬರಡಿ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಬಿಜೆಪಿ ಮಂಡಲ ಅದ್ಯಕ್ಷ ಪ್ರಮೋದ್, ಸಂಜಯ್ ಕೊಟ್ಟಿಗೆಹಾರ, ಪ್ರವೀಣ್ ಪೂಜಾರಿ, ದೀಪಕ್ ದೊಡ್ಡಯ್ಯ, ಸಿ.ಹೆಚ್ ಲೋಕೇಶ್, ಮನೋಜ್ ಹಳೇಕೋಟೆ, ಪ್ರಸನ್ನ ಮುಗ್ರಳ್ಳಿ, ಪಟೇಲ್ ಮಂಜು ಮತ್ತಿತರರಿದ್ದರು.