ಕಲಾವಿದೆಯ ವೈದ್ಯಕೀಯ ವೆಚ್ಚ ಮರು ಪಾವತಿಸಲು ಮೀಣಮೇಷ
ಗದಗ, ಡಿ.1: ರಂಗಭೂಮಿ ಕಲಾವಿದೆಯ ವೈದ್ಯಕೀಯ ವೆಚ್ಚ ಮರು ಪಾವತಿಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇಜವಾಬ್ದಾರಿ ತೋರಿಸಿದ್ದಲ್ಲದೆ, ತಾನೇ ವಿತರಿಸಿದ್ದ ವೈದ್ಯಕೀಯ ಸೌಲಭ್ಯದ ಗುರುತಿನ ಚೀಟಿಯನ್ನೆ ಅವರು ಪಡೆದಿಲ್ಲ ಎಂಬ ಶರಾ ಬರೆಯುವ ಮೂಲಕ ಕಲಾವಿದೆ ಆತ್ಮಕ್ಕೆ ಅಗೌರವ ತೋರಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ವೃತ್ತಿ ರಂಗಭೂಮಿ ಕಲಾವಿದೆ ಎಚ್.ಪ್ಲೋರಿನಾಬಾಯಿ ಕೊಟ್ರಪ್ಪ ಲಕ್ಕುಂಡಿ ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಮರುಪಾವತಿಸಲು ಇಲಾಖೆಯು ಅನಾದರ ಮಾಡುತ್ತಿದೆ. ಅವರ ಪತಿ, ಕಲಾವಿದ ಕೊಟ್ರಪ್ಪ ಎರಡು ವರ್ಷಗಳಿಂದ ಪುಡಿಗಾಸಿನ ಸೌಲಭ್ಯಕ್ಕಾಗಿ ಅಲೆದಾಡಿ ಹಾಸಿಗೆ ಹಿಡಿದಿದ್ದಾರೆ.
ಕಲಾವಿದೆ ಕುಟುಂಬಕ್ಕೆ ಮರು ಪಾವತಿಸಬೇಕಿರುವ ವೈದ್ಯಕೀಯ ವೆಚ್ಚದ ಮೊತ್ತವೂ ದೊಡ್ಡದಿಲ್ಲ. ಕೇವಲ 18,250 ರೂ.ಪಾವತಿಸಲು ಇಲಾಖೆ ಹಿಂದೆಮುಂದೆ ನೋಡುತ್ತಿದೆ. ನಿಯಮಾವಳಿ ಪ್ರಕಾರವೇ ಅರ್ಜಿ ಸಲ್ಲಿಸಿದ್ದರೂ ಪರಿಶೀಲಿಸಿ, ಪರಿಗಣಿಸಲು ಮನಸ್ಸು ಮಾಡುತ್ತಿಲ್ಲ. ಇದರಿಂದ, ಕುಟುಂಬ ತೊಂದರೆಗೆ ಸಿಲುಕಿದೆ.
ಸಮಸ್ಯೆ ಏನು: ಗದಗನ ಗುರು ಕೊಟ್ಟೂರೇಶ್ವರ ನಾಟಕ ಸಂಘದಲ್ಲಿ ಪ್ಲೋರಿನಾಬಾಯಿ 57 ವರ್ಷ ವೃತ್ತಿ ರಂಗಭೂಮಿ ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದರು. ಅವರ ಸುದೀರ್ಘ ರಂಗ ಸೇವೆಗೆ 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು. ಅಷ್ಟರಲ್ಲಿ ವಯೋಸಹಜ ಸಮಸ್ಯೆಯಿಂದ ಅವರು ಅಸಕ್ತರಾಗಿದ್ದರು.
ಸರಕಾರದ ಪರವಾಗಿ ಎಚ್.ಕೆ.ಪಾಟೀಲ್, ಉಮಾಶ್ರೀ ಅವರು ಪ್ಲೋರಿನಾಬಾಯಿ ಅವರ ಮನೆಗೆ ಭೇಟಿ ನೀಡಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಸಂಕಷ್ಟದಲ್ಲಿನ ಆಕೆ ಕಣ್ಣೀರು ಒರೆಸಿದ್ದರು. ಈಗ ಅವರ ಪತಿಯೇ ಕಣ್ಣೀರು ಹಾಕುತ್ತಿದ್ದರೂ ಗಮನಿಸುತ್ತಿಲ್ಲ.
ಪ್ಲೋರಿನಾಬಾಯಿ ಅವರು ಅನಾರೋಗ್ಯದಿಂದ ಸೆ.17ರಂದು ಗದಗ ಬೆಟಗೇರಿಯ ಸಿಎಸ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ಲೋರಿನಾಬಾಯಿ ಅವರ ಚಿಕಿತ್ಸೆಗಾಗಿ ಪತಿಯೇ ಹಣವನ್ನು ಖರ್ಚು ಮಾಡಿದ್ದರು. ಆದರೆ, ಸರಕಾರ ಈವರೆಗೂ ಚಿಕಿತ್ಸಾ ವೆಚ್ಚದ ಬಿಲ್ ಅನ್ನು ಮರು ಪಾವತಿ ಮಾಡುತ್ತಿಲ್ಲ ಎಂದು ಪ್ಲೋರಿನಾ ಅವರ ಪತಿ ಕೊಟ್ರಪ್ಪ ನೋವು ವ್ಯಕ್ತಪಡಿಸಿದ್ದಾರೆ.