×
Ad

ಮನೆಗೆ ನುಗ್ಗಿ ಒಡವೆ, ಹಣ ದೋಚಿ ಪರಾರಿ

Update: 2017-12-02 17:53 IST

ಹುಳಿಯಾರು,ಡಿ.02:ಮಧ್ಯರಾತ್ರಿ ಮನೆಗೆ ನುಗ್ಗಿ ಸುಮಾರು 2 ಲಕ್ಷ ಮೌಲ್ಯದ ಒಡವೆ ಸೇರಿದಂತೆ ಹಣ ದೋಚಿ ಪರಾರಿಯಾಗಿರುವ ಘಟನೆ ಹುಳಿಯಾರಿನ ರಾಂಗೋಪಾಲ್ ಸರ್ಕಲ್ ಬಳಿ ಶುಕ್ರವಾರ ರಾತ್ರಿ ಜರುಗಿದೆ.

ರಾಂಗೋಪಾಲ್ ಸರ್ಕಲ್ ಬಳಿಯ ವಾಸಿ ಫಾತೀಮಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಮನೆಯಲ್ಲಿ ಒಂಟಿ ಹೆಂಗಸು ಇರುವುದನ್ನು ಅರಿತ ಕಳ್ಳರು ಮುಖಕ್ಕೆ ಕಪ್ಪು ಮುಸುಕುದಾರಿ ಧರಿಸಿ ಮನೆಯ ಬಾಗಿಲು ತಟ್ಟಿದ್ದಾರೆ. ಮನೆಗೆ ಯಾರೋ ಬಂದಿರಬಹುದೆಂದು ಫಾತೀಮಾ ಬಾಗಿಲು ತೆರೆದಿದ್ದಾರೆ. ತಕ್ಷಣ ಮೂಗಿಗೆ ಚಾಕುವಿನಿಂದ ಚುಚ್ಚಿ, ಕೂಗಿಕೊಂಡರೆ ಕತ್ತು ಕೂಯ್ಯುವುದಾಗಿ ಹೆದರಿಸಿದ್ದಾರೆ.ಅಲ್ಲದೆ ಒಡವೆ ಹಾಗೂ ಹಣವನ್ನು ಕೊಡುವಂತೆ ಪೀಡಿಸಿದ್ದಾರೆ.

ಪರಿಣಾಮ ಫಾತೀಮಾ ಕಿರುಚಾಡದೆ ಮೌನವಾಗಿ ಮನೆಯಲ್ಲಿದ್ದ 24 ಸಾವಿರ ರೂ. ಹಾಗೂ ಮೈಮೇಲಿದ್ದ ಒಂದು ಜೊತೆ ಓಲೆ, ಲೇಡಿಸ್ ಬ್ರಾಸ್ ಲೈಟ್,ಕೈ ಬೆರಳುಗಳಿಗೆ ಹಾಕಿಕೊಂಡಿದ್ದ 3 ಚಿನ್ನದ ಉಂಗುರ, ಒಂದು ಬೆಳ್ಳಿ ಉಂಗುರ, ಬೆಳ್ಳಿ ಕಾಲುಂಗುರ, ಬೆಳ್ಳೆ ಕಾಲ್ಚೈನು ಸೇರಿದಂತೆ 2 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಕೊಟ್ಟಿದ್ದಾರೆ.

ಒಡವೆ ಹಾಗೂ ಹಣ ಪಡೆದ ಕಳ್ಳರು ಫಾತೀಮಾರ ಕೈ, ಕಾಲುಗಳನ್ನು ಕಟ್ಟಿ ಒಳಗಡೆ ಬಿಟ್ಟು ಹೊರಗಿನಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ. ನಂತರ ಕಟ್ಟು ಬಿಡಿಸಿಕೊಂಡು ನೆರೆಯ ವೆಂಕಟೇಶ್ ಎಂಬುವವರಿಗೆ ದೂರವಾಣಿ ಕರೆ ಮಾಡಿ ಬಾಗಿಲು ತೆಗೆಸಿಕೊಂಡು ಹೊರಬಂದು ಪೋಲಿಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಎಎಸ್‍ಪಿ ಶೋಭಾರಾಣಿ, ಡಿ.ವೈಎಸ್‍ಪಿ ವೇಣುಗೋಪಾಲ್,ಸರ್ಕಲ್ ಇನ್ಸ್ಪೆಕ್ಟರ್ ಮಾರಪ್ಪ, ಪಿಎಸ್‍ಐ ರವೀಂದ್ರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಬೆರಳಚ್ಚು ತಜ್ಞರು ಸಹ ಆಗಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News