ಹಸುಗಳ ಸಾವು: ಹುಲಿ ದಾಳಿ ಶಂಕೆ
ಮೂಡಿಗೆರೆ, ಡಿ.2: ತಾಲೂಕಿನ ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದುಸೆ ಎಂಬಲ್ಲಿ ಮೂರು ದನಗಳು ಸಾವಿಗೀಡಾಗಿದ್ದು, ಹುಲಿ ದಾಳಿ ನಡೆದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಉದುಸೆ ಎಂಬಲ್ಲಿನ ನಾಗೇಶ್ ಎಂಬವರಿಗೆ ಸೇರಿದ 1 ಎಮ್ಮೆ ಮತ್ತು 2 ಹೋರಿ ಕರುಗಳು ಸಾವಿಗೀಡಾಗಿವೆ. ಈ ದನಗಳು ಶುಕ್ರವಾರ ಮೇಯಲು ಬಿಟ್ಟಿದ್ದು ಮರಳಿ ಬಂದಿರಲಿಲ್ಲ. ಇವುಗಳನ್ನು ಇಂದು ಶನಿವಾರ ಹುಡುಕಿದಾಗ ಉದುಸೆ ಗ್ರಾಮದ ರವಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 100 ಅಡಿಗಳಷ್ಟು ದೂರಗಳಲ್ಲಿ ಒಂದೊಂದು ದನಗಳು ಸತ್ತು ಬಿದ್ದಿದ್ದವು.
ಎಷ್ಟು ಹೊತ್ತಿಗೆ ಸಾವಿಗೀಡಾಗಿವೆ ಎನ್ನುವುದು ತಿಳಿದಿಲ್ಲ. ಸತ್ತ ದನಗಳ ಕುತ್ತಿಗೆ ಬಳಿ ಗಾಯದ ಗುರುತುಗಳಿವೆ. ದೂರದಲ್ಲಿ ಹೀಗೆ ಹುಲಿಯಲ್ಲದೆ ಬೇರೆ ಪ್ರಾಣಿಗಳು ಕೊಲ್ಲುವುದಿಲ್ಲ. ಈ ದನಗಳ ಸಾವಿಗೆ ಹುಲಿ ದಾಳಿ ನಡೆಸಿರುವ ಸಾದ್ಯತೆಗಳಿವೆ. ಸುತ್ತಮುತ್ತಲಲ್ಲಿ ದಪ್ಪ ದಪ್ಪ ಗಾತ್ರದ ಹೆಜ್ಜೆ ಗುರುತುಗಳಿವೆ. ಈ ಭಾಗದಲ್ಲಿ ಹಿಂದೆ ತಿಂಗಳ ಹಿಂದೆಯೂ ಇಂತಹ ಹೆಜ್ಜೆ ಗುರುತುಗಳು ಕಂಡು ಬಂದಿದ್ದವು ಎಂದು ಸಾವಿಗೀಡಾದ ದನಗಳ ಮಾಲಿಕ ನಾಗೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಒಂದರ ಹಿಂದೊಂದರಂತೆ ಸತ್ತು ಬಿದ್ದಿರುವ ದನಗಳು ಹುಲಿ ದಾಳಿಯಿಂದ ನಡೆದಿವೆಯೇ ಎನ್ನುವ ಬಗ್ಗೆ ಖಚಿತವಾಗದಿದ್ದರೂ ಗ್ರಾಮದಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಗದ್ದೆ ಮತ್ತು ತೋಟಗಳಲ್ಲಿ ಕೆಲಸ ಕಾರ್ಯಕ್ಕೆ ತೆರಳಲು ಕಾರ್ಮಿಕರು ಭೀತಿ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯರಿಂದ ಸುದ್ದಿ ತಿಳಿದ ಜನ್ನಾಪುರದ ಅರಣ್ಯ ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿದ್ದು, ಇಂದು ರಾತ್ರಿ ಹುಲಿಯ ಸೆರೆಗೆ ಬೋನು ಇಡುವುದಾಗಿ ತಿಳಿಸಿದ್ದಾಗಿ ಸ್ಥಳಿಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟ ಮಾಹಿತಿ: ಎಸಿಎಫ್ ಮುದ್ದಣ್ಣ
‘ಹುಲಿ ದಾಳಿ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪರಿಶೀಲಿಸಲು ಸಿಬ್ಬಂದಿಗಳನ್ನು ಕಳುಹಿಸಲಾಗುವುದು. ಹಸುಗಳ ಮರಣೋತ್ತರ ಪರೀಕ್ಷೆ ನಂತರ ವೈದ್ಯರಿಂದ ಸ್ಪಷ್ಟವಾದ ಮಾಹಿತಿ ಸಿಗಲಿದೆ. ಜಾನುವಾರು ಸಾವಿಗೀಡಾಗಿದ್ದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು. ತಾಲೂಕಿನಲ್ಲಿ ಈ ಹಿಂದೆ ಎಲ್ಲೂ ಹುಲಿ ಬಂದಿರುವ ಉದಾಹರಣೆಯಿಲ್ಲ. ಹಿಂದೊಮ್ಮೆ ಭದ್ರಾ ಅರಣ್ಯ ವ್ಯಾಪ್ತಿಯಿಂದ ಬಂದಿರುವುದನ್ನು ಯಾರೋ ನೋಡಿರುವುದು ತಿಳಿದು ಬಂದಿತ್ತು. ಆದರೆ ಆ ಹುಲಿ ಆಗಲೇ ಭದ್ರಾ ಅರಣ್ಯ ವ್ಯಾಪ್ತಿಗೆ ವಾಪಸಾಗಿತ್ತು’
-ಮುದ್ದಣ್ಣ, ಎಸಿಎಫ್, ಮೂಡಿಗೆರೆ.