×
Ad

ತಿಂಗಳ ಕೊನೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಎಚ್.ಡಿ.ಕುಮಾರಸ್ವಾಮಿ

Update: 2017-12-02 19:25 IST

ಬೆಂಗಳೂರು, ಡಿ.2: ಬೆಂಗಳೂರಿನ ಬಹಳಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಡಿ.3 ಅಥವಾ 4ರಂದು ಸಭೆ ಕರೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಡೆದ ಜೆಡಿಎಸ್ ಬೂತ್ ಕಮಿಟಿ ಸಭೆಯಲ್ಲಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಸಭೆ ಕರೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್, ಬಿಜೆಪಿ ಬಿಡುಗಡೆ ಮಾಡುವ ಮುನ್ನವೇ ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದವರಿಗೆ ರಕ್ಷಣೆ ನೀಡುತ್ತೇನೆ ಎಂದು ಆಶ್ವಾಸನೆ ನೀಡುತ್ತಾರೆಯೇ ವಿನಹ ಯಾರನ್ನೂ ರಕ್ಷಣೆ ಮಾಡಿಲ್ಲ. ಅಲ್ಪಸಂಖ್ಯಾತರ ಸಮಾವೇಶವನ್ನು ತುಮಕೂರಿನಲ್ಲಿ ಮಾಡಲಾಗುತ್ತಿದೆ. ಡಿ.13ರಂದು ನಗರದ ಅರಮನೆ ಮೈದಾನದಲ್ಲಿ ದಲಿತ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷ ಬಿಟ್ಟ ಮೇಲೆ ಯಾವ್ಯಾವ ಪಕ್ಷದ ಬಾಗಿಲನ್ನು ತಟ್ಟಿದರು ಎಂಬುದು ತಮಗೆ ಗೊತ್ತಿದೆ. ಸದ್ಯದಲ್ಲಿಯೇ ಅವರ ಮಧ್ಯವರ್ತಿಗಳೆ ಆ ವಿಚಾರವನ್ನು ಬಯಲು ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸಿದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಡಾ.ಪರಮೇಶ್ವರ್ ಅವರನ್ನು ಮೂಲೆ ಗುಂಪು ಮಾಡುತ್ತಿರುವುದಲ್ಲದೆ, ಹೈಕಮಾಂಡ್‌ನ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಂಡು ಮುಂದಿನ ಬಾರಿಯೂ ಮೈಸೂರಿನ ದಸರಾವನ್ನು ತಾವೆ ಉದ್ಘಾಟಿಸುತ್ತೇನೆಯೆಂದು ಹೇಳಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ನಿಖಿಲ್‌ಗೌಡ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಅವರಿಗೆ ಪಕ್ಷದಲ್ಲಿ ಯಾವುದೆ ಜವಾಬ್ದಾರಿಯನ್ನೂ ನೀಡಿಲ್ಲ. ಆದರೆ, ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರಾದ ವಿನಯ್ ಹಾಗೂ ಸಂತೋಷ್ ಅವರ ಜಗಳವನ್ನು ಬಿಎಸ್‌ವೈ ಅವರು ಕುಳಿತು ಮಾತನಾಡಿ ಬಗೆಹರಿಸಬೇಕು. ಅಲ್ಲದೆ, ಕಾಂಗ್ರೆಸ್ ಸರಕಾರಕ್ಕೆ ರೈತರ ಬಗ್ಗೆ ಯಾವುದೆ ಕಾಳಜಿಯಿಲ್ಲ ಎಂದು ಹೇಳಿದರು.

ಬಿಎಸ್‌ವೈ ಅವರು ಮಹಾದಾಯಿ ವಿಚಾರವನ್ನು ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿದರೆ ಖುಷಿ ಪಡುತ್ತೇವೆ. ಪ್ರಧಾನಿ ಅವರು ಮಧ್ಯ ಪ್ರವೇಶಿಸಿದರೆ ಈ ಸಮಸ್ಯೆ ಬಗೆ ಹರಿಯಲು ತಡವಾಗುವುದಿಲ್ಲ ಎಂದು ಹೇಳಿದರು.

ಚನ್ನಪಟ್ಟಣದಿಂದ ಅನಿತಾ ಅಭ್ಯರ್ಥಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಅನಿತಾಕುಮಾರಸ್ವಾಮಿ ಅವರನ್ನೆ ನಿಲ್ಲಿಸಬೇಕೆಂದು ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ, ಕಳೆದ ಬಾರಿಯೂ ಅನಿತಾಕುಮಾರಸ್ವಾಮಿ ಅವರು ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು. ಹೀಗಾಗಿ, ಅವರನ್ನೆ ಚನ್ನಪಟ್ಟಣ ಕ್ಷೇತ್ರದಿಂದ ನಿಲ್ಲಿಸಲು ಚಿಂತನೆ ನಡೆದಿದೆ.

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ಜೆಡಿಎಸ್ ರಾಜ್ಯಾಧ್ಯಕ್ಷ

ಕೆಂಪಯ್ಯ ಇರೋದೆ ಅನುಕೂಲಕ್ಕೆ
ಕೆಂಪಯ್ಯ ಕಾಂಗ್ರೆಸ್ ಸರಕಾರದಲ್ಲಿ ಇರೋದು ಕೊಲೆಯನ್ನು ಕೊಲೆ ಅಲ್ಲ ಎಂದು ವರದಿ ನೀಡಿಸಲು, ಕೊಲೆ ಆಗದಿದ್ದರೂ ಕೊಲೆ ಆಗಿದೆ ಎಂಬ ವರದಿ ಕೊಡಿಸಲು. ಹೀಗಾಗಿ, ಕಾಂಗ್ರೆಸ್ ಸರಕಾರವೆ ಅವರನ್ನು ನೇಮಕ ಮಾಡಿಕೊಂಡು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News