ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು
ಬೆಳಗಾವಿ, ಡಿ.2: ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಹೋದ ಯುವಕ ಬಾವಿಗೆ ಬಿದ್ದು ಸಾವಿಗೀಡಾಗಿರುವ ಘಟನೆ ಬೆಳಗಾವಿಯ ಹೊನಗಾ ಗ್ರಾಮದ ಬಳಿ ನಡೆದಿದೆ.
ಅಡಿವೆಪ್ಪಾ(24) ಸಾವಿಗೀಡಾದ ಯುವಕ. ಬೆಳಗಿನ ಜಾವ ಕಳ್ಳಭಟ್ಟಿ ತೆಗೆದುಕೊಂಡು ಹೋಗುವಾಗ ಪೊಲೀಸರು ದಾಳಿ ಮಾಡಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಹಾರಿದ್ದರಿಂದ ಈ ಅನಾಹುತ ಜರುಗಿದೆ ಎನ್ನಲಾಗಿದೆ.
ಆದರೆ ಯುವಕನ ಸಾವಿಗೆ ಪೊಲೀಸರೇ ಕಾರಣ ಎಂದು ದೂರಿರುವ ಯುವಕನ ಸಂಬಂಧಿಕರು ಅಬಕಾರಿ ಪೊಲೀಸರ ಮೇಲೆ ಕಲ್ಲೂ ತೂರಾಟಕ್ಕೆ ಯತ್ನಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಶವಪರೀಕ್ಷೆ ನಡೆಸಲು ಅಡ್ಡಿ ಪಡಿಸಿದ್ದು, ಸ್ಥಳ್ಕಕೆ ಪೊಲೀಸರು ಆಗಮಿಸಿದ್ದಾರೆ.
ಯುವಕನ ಸಾವಿನಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಕೈಯಲ್ಲಿ ಕಲ್ಲುಗಳನ್ನು ಹಿಡಿದು ಜನರು ದಾಳಿಗೆ ಮುಂದಾಗಿ, ಪೊಲೀಸರ ಕಾರಿನ ಗಾಜುಗಳನ್ನು ಪುಡಿಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿದ ಯುವಕ ಅಡಿವೆಪ್ಪಾ ಕಳ್ಳಭಟ್ಟಿ ಸಾಗಿಸುತ್ತಿದ್ದ. ಅಬಕಾರಿ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಯುವಕ ಬಾವಿಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಲಾಟಕರ ಹೇಳಿದ್ದಾರೆ.