ಬೆಂಗಳೂರು : ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾ.ರಾ.ಗೋವಿಂದು ಆಯ್ಕೆ

Update: 2017-12-02 14:33 GMT

ಬೆಂಗಳೂರು, ಡಿ.2: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.22 ಮತ್ತು 23 ರಂದು ಹಮ್ಮಿಕೊಂಡಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕನ್ನಡ ಕಟ್ಟುವ, ಬೆಳೆಸುವ ನಿಟ್ಟಿನಲ್ಲಿ ಪರಿಷತ್ತಿನಿಂದ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿ, ಸಾಹಿತ್ಯ ಸಮ್ಮೇಳನವನ್ನು ನಗರದ ಗಡಿ ಭಾಗವಾದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸಾರಥಿಯನ್ನು ಸಾ.ರಾ.ಗೋವಿಂದು ವಹಿಸಿಕೊಂಡು ಮುನ್ನಡೆಸಲಿದ್ದಾರೆ ಎಂದು ತಿಳಿಸಿದರು.

ಡಿ.27 ರಂದು 7 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ಪುಣ್ಯಭೂಮಿ ಬಳಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಾಹನ ಮೆರವಣಿಗೆ ಹೊರಡಲಿದ್ದು, ಚಿತ್ರನಟ ದರ್ಶನ್ ತೂಗುದೀಪಕ್ಕೆ ಚಾಲನೆ ನೀಡುತ್ತಾರೆ. ಅನಂತರ ವಾಹನ ರ್ಯಾಲಿ ವರ್ತುಲ ರಸ್ತೆಯಲ್ಲಿ ಸಾಗಿ, ನಾಯಂಡಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್, ಜೆಪಿ ನಗರ, ಸಿಲ್ಕ್ ಬೋರ್ಡ್ ಮೂಲಕ ಸಾಗಿ ಬೊಮ್ಮಸಂದ್ರದ ಬಿಟಿಎಲ್ ಕಾಲೇಜು ಬಳಿ ಸೇರಲಿದೆ. ಅನಂತರ ಅಲ್ಲಿಂದ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಪರಿಸರ, ಕನ್ನಡ, ಆರೋಗ್ಯ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಜಕೀಯ ಮುಖಂಡರು, ಸಾಹಿತಿಗಳು, ಪರಿಸರವಾದಿಗಳು, ಚಿಂತಕರು, ವಿಮರ್ಶಕರು ಪಾಲ್ಗೊಂಡು ವಿಚಾರ ಮಂಡನೆ ಮಾಡಲಿದ್ದಾರೆ. ವಿದ್ಯಾರ್ಥಿ, ಯುವ ಹಾಗೂ ಹಿರಿಯರ ಕವಿಗೋಷ್ಠಿಗಳು ನಡೆಯಲಿದೆ. ಇದೇ ವೇಳೆ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ 30 ಜನ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News