×
Ad

'ದೇಶದ 10 ವಿವಿಗಳಿಗೆ ಶೇ. 100 ರಷ್ಟು ಸ್ವಾಯತ್ತತೆ ಚಿಂತನೆ' : ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

Update: 2017-12-02 20:18 IST

ಶಿವಮೊಗ್ಗ, ಡಿ. 2: 'ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಮೌಲ್ಯಾಂಕದ ವ್ಯವಸ್ಥೆಯ ಮೇಲೆ ಒತ್ತು ನೀಡಲಾಗಿದೆ. ವಿವಿಗಳು ತಮ್ಮ ಸಾಮಥ್ರ್ಯವನ್ನು ಆರೋಗ್ಯಕರ ಸ್ಪರ್ಧೆಯ ಮೂಲಕ ವೃದ್ದಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿಯೇ ದೇಶದ 10 ವಿವಿಗಳನ್ನು ಅತ್ಯುತ್ಕøಷ್ಟ ಕೇಂದ್ರಗಳೆಂದು ಗುರುತಿಸಿ ಅವುಗಳಿಗೆ ಶೇಕಡಾ 100 ರಷ್ಟು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸ್ವಾಯತ್ತತೆಯನ್ನು ಕೊಡುವ ಚಿಂತನೆ ನಡೆಸಲಾಗಿದೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೆಕರ್ ತಿಳಿಸಿದ್ದಾರೆ. 

ಜಿಲ್ಲೆಯ ಶಂಕರಘಟ್ಟದಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾಲಯದ 28 ನೇ ಘಟಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಘಟಿಕೋತ್ಸವ ಭಾಷಣ ಮಾಡಬೇಕಾಗಿದ್ದ ಸಚಿವ ಪ್ರಕಾಶ್ ಜಾವಡೆಕರ್‍ರವರು ಗೈರು ಹಾಜರಾಗಿದ್ದರು. ಆದರೆ ಭಾಷಣದ ಪ್ರತಿಯನ್ನು ವಿವಿಗೆ ಕಳುಹಿಸಿಕೊಟ್ಟಿದ್ದರು. ಅವರ ಅನುಪಸ್ಥಿತಿಯಲ್ಲಿ ವಿವಿಯ ಕಲಾನಿಕಾಯದ ಡೀನ್ ಪ್ರೊ.ರಾಜಾರಾಂ ಹೆಗ್ಡೆರವರು ಸಚಿವರು ಕಳುಹಿಸಿಕೊಟ್ಟಿದ್ದ ಭಾಷಣದ ವಿವರಗಳನ್ನು ಸಭೆಯ ಮುಂದಿಟ್ಟರು. 

ಜಾಗತೀಕರಣಗೊಂಡ ಜಗತ್ತಿನಲ್ಲಿ ಶಿಕ್ಷಣ ಪಡೆಯುವುದು ಮಾತ್ರ ಮುಖ್ಯವಲ್ಲ. ಕೌಶಲ್ಯ ಅಥವಾ ಮಾಹಿತಿಯನ್ನು ಪಡೆಯುವುದು ಮುಖ್ಯವಲ್ಲ. ಈ  ಮಾಹಿತಿಯನ್ನು ಸಂಸ್ಕರಿಸಿ ನಮ್ಮ ಸಾಮಾಜಿಕ ಸಂದರ್ಭಕ್ಕೆ ಸೂಕ್ತವಾಗುವ ವಿಚಾರಗಳ ಮತ್ತು ಕ್ರಿಯೆಗಳ ಸುಸಂಗತವಾದ ರೂಪವೊಂದನ್ನು ಸೃಷ್ಟಿಸಬಲ್ಲ ಸಂತುಲಿತವಾದ ಮನಸ್ಸು ಇಂದು ಮುಖ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಭಾರತ ತನ್ನ ಉನ್ನತ ಶಿಕ್ಷಣ ಕ್ಷೇತ್ರದ ಸ್ವರೂಪವನ್ನು ಗಮನಾರ್ಹವಾಗಿ ರೂಪಾಂತರಿಸಿಕೊಂಡಿದೆ. ಅದು ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕಲಿಕೆಯ ನಿರೀಕ್ಷಿತ ಫಲಿತಾಂಶಗಳನ್ನು ಕೂಡ ಬದಲಾಯಿಸಿಕೊಂಡಿದೆ. ಸರ್ಕಾರವು ಕೇಂದ್ರದಿಂದ ಬೆಂಬಲಿತವಾದ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.

ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಾ ಅಭಿಯಾನ, ರಾಷ್ಟ್ರೀಯ  ರಾಷ್ಟ್ರೀಯ ಉಚ್ಚತಮ ಶಿಕ್ಷಾ ಅಭಿಯಾನ ಆಶಾದಾಯಕವಾದ ಪರಿಣಾಮವನ್ನು ಬೀರಿವೆ. ಈಗಿರುವ ಶಿಕ್ಷಣದ ಸ್ಥಿತಿಯನ್ನು ಗಮನಿಸಿ ಕೇಂದ್ರ ಸರ್ಕಾರ ಪಂಡಿತ್ ಮದನ್ ಮೋಹನ ಮಾಳವೀಯ ರಾಷ್ಟ್ರೀಯ ಶಿಕ್ಷಣ ಹಾಗೂ ಶಿಕ್ಷಕ ಯೋಜನೆಯನ್ನು ಅನುಷ್ಟಾನಕ್ಕೆ ತಂದಿದೆ. 

ಈ ಯೋಜನೆಯು ಶಿಕ್ಷಕರು ಭೋಧನೆ, ಶಿಕ್ಷಕರ ತಯಾರಿ, ವೃತ್ತಿಪರ ಪ್ರಗತಿ, ಪಠ್ಯಕ್ರಮ ರಚನೆ, ಬೋಧನಾ ಕ್ರಮದಲ್ಲಿ ಸಂಶೋಧನೆ, ಪರಿಣಾಮಕಾರಿಯಾದ ಬೋಧನಾ ಕ್ರಮ ರಚನೆ ಇವೇ ಮೊದಲಾದ ಎಲ್ಲ ಅಂಶಗಳನ್ನು ಉದ್ದೇಶಿಸಿದೆ. ಮುಂದಿನ ಎರಡು ದಶಕದಲ್ಲಿ ತ್ವರಿತವಾದ ಪ್ರಗತಿಯನ್ನು ಸಾಧಿಸಬೇಕಾದರೆ ಶಿಕ್ಷಣ ಸಂಸ್ಥೆ, ಉದ್ದಿಮೆ ಹಾಗೂ ಸರ್ಕಾರದಿಂದ ಬದ್ದತೆಯುಳ್ಳ ಒಗ್ಗೂಡಿದ ಪ್ರಯತ್ನದ ಅವಶ್ಯಕತೆ ಇದೆ ಎಂದು ಹೇಳಿದರು.

ಬಹುಕಾಲದಿಂದ ಶ್ರೇಷ್ಟತೆ ಮತ್ತು ಸಮಾನತೆಗಳ ನಡುವೆ ನಡೆದು ಬಂದಿದ್ದ ವಿವಾದವನ್ನು ತಂತ್ರಜ್ಞಾನದ ಪರಿಣಾಮಕಾರಿಯಾದ ಬಳಕೆಯ ಮೂಲಕ ಭಾರತವು ನಿವಾರಿಸಿಕೊಂಡಿದೆ. ವಿಶ್ವವಿದ್ಯಾಲಯಗಳು ಇಂದಿನ ಸಂದರ್ಭದಲ್ಲಿ ಶಿಕ್ಷಣದ ಬಗೆಗಿನ ತಮ್ಮ ಮಾದರಿಯನ್ನು ಮರುವ್ಯಾಖ್ಯಾನಗೊಳಿಸುವ ಅವಶ್ಯಕತೆ ಇದೆ. ನಮ್ಮಲ್ಲಿ ವಿವಿಧ ಶಿಸ್ತುಗಳ ಮಧ್ಯ ಹಾಗೂ ನಿಕಾಯಗಳ ನಡುವೆ ಪ್ರಬಲವಾದ ಗೋಡೆಗಳಿವೆ. ಪದವಿಗಳನ್ನು ಕೂಡ ಅದೇ ಮಾದರಿಯಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್, ಕುಲಸಚಿವ ಪ್ರೊ. ಹೆಚ್.ಎಸ್. ಬೋಜಾನಾಯ್ಕ, ಮೌಲ್ಯಮಾಪನ ಕುಲಸಚಿವ ಪ್ರೊ.ರಾಜಾನಾಯಕ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News