×
Ad

ರಾಜ್ಯಪಾಲ, ಕೇಂದ್ರ ಮಂತ್ರಿ, ಉನ್ನತ ಶಿಕ್ಷಣ ಸಚಿವರ ಗೈರು : ನೀರಸವಾದ ಕುವೆಂಪು ವಿವಿಯ ಘಟಿಕೋತ್ಸವ ಸಮಾರಂಭ!

Update: 2017-12-02 20:22 IST

ಶಿವಮೊಗ್ಗ, ಜ. 2: ಈ ಹಿಂದೆ ವಿಶ್ವ ವಿದ್ಯಾಲಯಗಳ ಘಟಿಕೋತ್ಸವ ಕಾರ್ಯಕ್ರಮ ತನ್ನದೆ ಆದ ಪ್ರಾವಿತ್ರ್ಯತೆ, ಮಹತ್ವ ಹೊಂದಿದ್ದವು. ಅದರಲ್ಲಿಯೂ ಘಟಿಕೋತ್ಸವ ಭಾಷಣ ಮಾಡಲು ಆಗಮಿಸುವ ಮುಖ್ಯ ಅತಿಥಿಗಳ ಭಾಷಣ ಸಾಕಷ್ಟು ಗಮನ ಸೆಳೆಯುತ್ತಿತ್ತು. ಜೊತೆಗೆ ವಿವಿಗಳು ನೀಡುವ ಗೌರವ ಡಾಕ್ಟರೇಟ್‍ಗಳು ಸಾಕಷ್ಟು ಸದ್ದು ಮಾಡುತ್ತಿತ್ತು. 

ಆದರೆ ಬದಲಾದ ಕಾಲಘಟ್ಟದಲ್ಲಿ ವಿವಿಗಳ ಘಟಿಕೋತ್ಸವ ಸಮಾರಂಭಗಳು ಮಹತ್ವ ಕಳೆದುಕೊಳ್ಳುತ್ತಿವೆ. ಕೇವಲ ಕಾಟಾಚಾರಕ್ಕೆ ಎಂಬಂತಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರ ನಡೆದ ಕುವೆಂಪು ವಿಶ್ವ ವಿದ್ಯಾನಿಲಯದ 28 ನೇ ಘಟಿಕೋತ್ಸವ ಸಮಾರಂಭ ಸಾಕ್ಷಿಯಾಯಿತು. ಶಿಷ್ಟಾಚಾರದ ರೀತ್ಯ ಹಾಜರಿರಬೇಕಾದ ಬಹುತೇಕ ಗಣ್ಯ ಮಹೋದಯರು ಗೈರು ಹಾಜರಾಗಿದ್ದರು. ಈ ಬಾರಿ ಗೌರವ ಡಾಕ್ಟರೇಟ್ ಕೂಡ ಘೋಷಣೆ ಮಾಡಿರಲಿಲ್ಲ. ಇದರಿಂದ ಘಟಿಕೋತ್ಸವ ಸಮಾರಂಭ ಕಳಾಹೀನಗೊಳ್ಳುವುದರ ಜೊತೆಗೆ ನೀರಸವಾಗುವಂತೆ ಮಾಡಿತು. 

ಗೈರು: ವಿಶ್ವವಿದ್ಯಾಲಯ ಕುಲಾಧಿಪತಿಗಳೂ ಆದ ರಾಜ್ಯಪಾಲ ವಜುಭಾಯಿ ವಾಲಾ, ಸಮಕುಲಾಧಿಪತಿಯೂ ಆದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಘಟಿಕೋತ್ಸವ ಭಾಷಣ ಮಾಡಬೇಕಾಗಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‍ರವರು ಸಮಾರಂಭಕ್ಕೆ ಆಗಮಿಸರಲಿಲ್ಲ. 

ಘಟಿಕೋತ್ಸವಕ್ಕೆ ರಾಜ್ಯಪಾಲರು ಆಗಮಿಸುವುದು ಬಹುತೇಕ ಖಚಿತವಾಗಿತ್ತು. ರಾಜ್ಯಪಾಲರ ಭವನದಿಂದಲೂ ಅವರ ಪ್ರವಾಸದ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಘಟಿಕೋತ್ಸವ ಸಮಾರಂಭಕ್ಕೆ ಆಗಮಿಸುವ ಅವರ ವೇಳಾಪಟ್ಟಿ ದಿಢೀರ್ ಆಗಿ ರದ್ದುಗೊಂಡಿತ್ತು. ಕಾರಣ ಗೊತ್ತಾಗಿಲ್ಲವಾಗಿದೆ. ಇತ್ತೀಚೆಗೆ ರಾಜ್ಯಪಾಲರು ವಿವಿಗಳ ಘಟಿಕೋತ್ಸವ ಸಮಾರಂಭಕ್ಕೆ ಗೈರು ಹಾಜರಾಗುತ್ತಿರುವುದು ಅಕಾಡೆಮಿಕ್ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಆಸ್ಪದವಾಗಿದೆ. 

ಘಟಿಕೋತ್ಸವ ಭಾಷಣ ಮಾಡಲು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಪ್ರಕಾಶ್ ಜಾವಡೇಕರ್‍ರವರು ಕೂಡ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೆಂದು ಹೇಳಿ, ಘಟಿಕೋತ್ಸವದ ವೇಳೆ ತಾವು ಮಾಡಬೇಕಾಗಿದ್ದ ಭಾಷಣದ ಪ್ರತಿಗಳನ್ನು ವಿವಿಗೆ ಕಳುಹಿಸಿಕೊಟ್ಟಿದ್ದರು. ಶನಿವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಕಲಾನಿಕಾಯದ ಡೀನ್ ಪ್ರೊ.ರಾಜಾರಾಂ ಹೆಗ್ಡೆ ಸಚಿವರ ಭಾಷಣವನ್ನು ಓದಿದರು. 

'ದೇಶದ ಭವಿಷ್ಯದ ಪ್ರಜೆಗಳನ್ನುದ್ದೇಶಿಸಿ ಅತ್ಯಮೂಲ್ಯವಾದ ಸಂದೇಶ ನೀಡಬೇಕಾಗಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಕುವೆಂಪು ವಿವಿಯ ಘಟಿಕೋತ್ಸವ ಭಾಷಣ ಮಾಡುವುದಕ್ಕಿಂತ ಗುಜರಾತ್ ಚುನಾವಣೆಯಲ್ಲಿ ಭಾಷಣ ಮಾಡುವುದೇ ಮುಖ್ಯ ಎಂದೆನಿಸಿರಬೇಕು. ಅದಕ್ಕಾಗಿ ಅವರು ಗೈರು ಹಾಜರಾಗಿದ್ದಾರೆ' ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು. 

ಉಳಿದಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಕೂಡ ಗೈರು ಹಾಜರಾಗಿದ್ದು, ವಿದ್ಯಾರ್ಥಿಗಳ ಅಸಮಾಧಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಅನ್ಯ ಕಾರ್ಯದ ನಿಮಿತ್ತ ಬರಲಾಗುತ್ತಿಲ್ಲವೆಂಬ ಸಂದೇಶವನ್ನು ಅವರು ವಿವಿಗೆ ರವಾನಿಸಿದ್ದರು. 'ರಾಜ್ಯಪಾಲರು, ಕೇಂದ್ರ ಸಚಿವರು ಬರದಿದ್ದರೂ ಉನ್ನತ ಶಿಕ್ಷಣ ಸಚಿವರು ಬರುವ ವಿಶ್ವಾಸವಿತ್ತು. ಆದರೆ ಅವರು ಕೂಡ ಆಗಮಿಸದಿದ್ದುದು ನಿಜಕ್ಕೂ ಬೇಸರದ ಸಂಗತಿಯಾಗಿದೆ' ಕೆಲ ವಿದ್ಯಾರ್ಥಿಗಳು ಹೇಳಿದರು. 

ನಿರಾಶೆ: ಕುವೆಂಪು ವಿವಿಯ ಬಹುತೇಕ ಘಟಿಕೋತ್ಸವಗಳು ತೆರೆದ ಸಭಾಂಗಣದಲ್ಲಿ ನಡೆದಿದ್ದವು. ಆದರೆ ಈ ಬಾರಿಯ ಘಟಿಕೋತ್ಸವವನ್ನು ಜ್ಞಾನ ಸಹ್ಯಾದ್ರಿ ಪರೀಕ್ಷಾಂಗ ವಿಭಾಗ ಕಟ್ಟಡ ಸಮೀಪದಲ್ಲಿ ಭವ್ಯವಾಗಿ ನಿರ್ಮಿಸಲಾಗಿರುವ ನೂತನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಗಣ್ಯ ಅತಿಥಿಗಳ ಗೈರು ಹಾಜರಿಯಿಂದ ಕಾರ್ಯಕ್ರಮ ಕಳೆಗುಂದುವಂತಾಗಿತ್ತು. ಗಣ್ಯರ ಸಮ್ಮುಖದಲ್ಲಿ ಚಿನ್ನದ ಪದಕ, ಪ್ರಮಾಣ ಪತ್ರ ಪಡೆಯಬೇಕೆಂಬ ಹಂಬಲದಿಂದ ಶ್ವೇತ ವಸ್ತ್ರಧಾರಿಗಳಾಗಿ ಆಗಮಿಸಿದ್ದ ವಿದ್ಯಾರ್ಥಿಗಳು ಗಣ್ಯರ ಅನುಪಸ್ಥಿತಿಯಿಂದ ಭ್ರಮನಿರಸನಗೊಳ್ಳುವಂತಾಯಿತು.

112 ಸ್ವರ್ಣ ಪದಕ ಪ್ರದಾನ
ಘಟಿಕೋತ್ಸವದಲ್ಲಿ 112 ಸ್ವರ್ಣ ಪದಕ ಪ್ರದಾನ ಮಾಡಲಾಯಿತು. ಒಟ್ಟಾರೆ 11 ಪುರುಷರು ಮತ್ತು 52 ಮಹಿಳೆಯರು ಪದಕ ಪಡೆದುಕೊಂಡಿದ್ದಾರೆ. ಶಂಕರಘಟ್ಟ ಜ್ಞಾನಸಹ್ಯಾದ್ರಿಯ ಕನ್ನಡ ಅಧ್ಯಯನ ವಿಭಾಗದ ಎಸ್. ಶಿಲ್ಪಾ ಅತಿ ಹೆಚ್ಚು ಅಂದರೆ 6 ಸ್ವರ್ಣ ಪದಕ ಮತ್ತು ಒಂದು ನಗದು ಬಹುಮಾನ ಗೌರವಕ್ಕೆ ಪಾತ್ರರಾಗಿದ್ದಾರೆ. ಶಂಕರಘಟ್ಟದ ಜೈವಿಕ ತಂತ್ರಜ್ಞಾನ ವಿಭಾಗದ  ಎಸ್. ಅಶ್ವಿನಿ, ಎಟಿಎನ್‍ಸಿಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಎನ್. ಹರ್ಷಿತಾ ತಲಾ 5 ಸ್ವರ್ಣ ಪದಕ ಪಡೆದಿದ್ದಾರೆ. 

ತಲಾ 4 ಸ್ವರ್ಣ ಪದಕಗಳನ್ನು ಪರಿಸರ ವಿಜ್ಞಾನ (ಎಂಎಸ್ಸಿ)ಯ ವಿದ್ಯಾರ್ಥಿನಿ ಸಿ. ಸುಶ್ಮಿತಾ, ಸಮಾಜಶಾಸ್ತ್ರ ವಿಭಾಗದ ಎ. ಎಂ. ಸಪ್ತಮಿ, ರಸಾಯನಶಾಸ್ತ್ರದ ವಿ.ಎಲ್. ಸ್ವಾತಿ ಮತ್ತು ಎಂಬಿಎ ವಿಭಾಗದ ಎಚ್. ಜೆ. ಮಾಧುರಿ ಪಡೆದಿದ್ದಾರೆ. ತಲಾ 3 ಸ್ವರ್ಣ ಪದಕಗಳನ್ನು ಇಂಗ್ಲಿಷ್ ಎಂಎಯ ವಿದ್ಯಾರ್ಥಿನಿ ಡಯಾನಾ ಅಲ್ಬರ್ಟ್, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ಇ. ಕಲ್ಲೇಶ್, ಪತ್ರಿಕೋದ್ಯಮ ವಿಭಾಗದ ಎ. ಪಿ. ಮೇಘನಾ ಮತ್ತು ಎಂಸಿಎ ವಿಭಾಗದ ವಿ.ಆರ್. ತೇಜಸ್ವಿನಿ ತಮ್ಮದಾಗಿಸಿಕೊಂಡಿದ್ದಾರೆ. ಪಿಎಚ್‍ಡಿಯನ್ನು ಕಲಾ ವಿಭಾಗದಿಂದ 25, ವಾಣಿಜ್ಯ ವಿಭಾಗದಿಂದ 5, ವಿಜ್ಞಾನ ವಿಭಾಗದಿಂದ 78,  ಶಿಕ್ಷಣ ಮತ್ತು ತಾಂತ್ರಿಕ ತಾಂತ್ರಿಕ ವಿಭಾಗದಿಂದ ತಲಾ ಮೂವರು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News