ಡಿ.4 ರಂದು ಗೌರಿ ಸ್ಮಾರಕ ಟ್ರಸ್ಟ್ ಘೋಷಣೆ
ಬೆಂಗಳೂರು, ಡಿ.2: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಾರ್ಥವಾಗಿ ಗೌರಿ ಸ್ಮಾರಕ ಟ್ರಸ್ಟ್ ರಚನೆ ಮಾಡಿದ್ದು, ಡಿ.4 ನೋಂದಣಿ ಮಾಡಿಸಿ ಅಧಿಕೃತವಾಗಿ ಟ್ರಸ್ಟ್ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಹಾಗೂ ಟ್ರಸ್ಟ್‌ನ ಮಾರ್ಗದರ್ಶಕ ಎಚ್.ಎಸ್.ದೊರೆಸ್ವಾಮಿ, ಸಂವಿಧಾನ ಆಧಾರಿತ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಟ್ರಸ್ಟ್ ಕೆಲಸ ನಿರ್ವಹಿಸಲಿದೆ. ಪ್ರಮುಖವಾಗಿ ಗೌರಿ ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಗೌರಿ ಲಂಕೇಶ್ ಹತ್ಯೆಯಾಗಿ ಮೂರು ತಿಂಗಳುಗಳಿಗೂ ಅಧಿಕವಾಗುತ್ತಿದೆ. ಇದುವರೆಗೂ ಸರಕಾರ, ಪೊಲೀಸ್ ಇಲಾಖೆ ಹಾಗೂ ಎಸ್‌ಐಟಿ ಅಧಿಕಾರಿಗಳು ಯಾರನ್ನೂ ಹಂತಕರು ಎಂದು ಗುರುತಿಸಿಲ್ಲ. ಸರಕಾರ ತನಿಖೆ ನಡೆಸುತ್ತಿರುವ ಕ್ರಮ ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆಯಾ ಎಂದು ಆತಂಕ ವ್ಯಕ್ತವಾಗುತ್ತಿದೆ. ಹೀಗಾಗಿ, ಮೊದಲು ಯಾರು ಹತ್ಯೆ ಮಾಡಿದರು ಎಂಬುದನ್ನು ಪತ್ತೆ ಮಾಡಿದರೆ, ಯಾರು ಮಾಡಿಸಿದ್ದಾರೆ ಎಂದು ತಿಳಿಯುತ್ತದೆ ಎಂದು ಹೇಳಿದರು.
ಟ್ರಸ್ಟ್‌ನ ಟ್ರಸ್ಟಿ ವಿ.ಎಸ್.ಶ್ರೀಧರ್ ಮಾತನಾಡಿ, ಗೌರಿಯ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿರುವ ಈ ಟ್ರಸ್ಟ್‌ಗೆ ಎಚ್.ಎಸ್. ದೊರೆಸ್ವಾಮಿ, ತೀಸ್ತಾ ಸೆಟಲ್ವಾಡ್ ಹಾಗೂ ಇತರರು ಮಾರ್ಗದರ್ಶಕರಾಗಿದ್ದು, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ‘ವಾರ್ತಾಭಾರತಿ’ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಕೆ.ಎಲ್.ಅಶೋಕ್, ಎನ್.ಮುನಿಸ್ವಾಮಿ, ಹಾರ್ದಿಕ್ ದೇಸಾಯಿ, ಗಣೇಶದೇವಿ, ಡಾ.ರಹಮತ್ ತರೀಕೆರೆ, ಕೆ.ನೀಲಾ, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವರು ಟ್ರಸ್ಟಿಗಳಾಗಿದ್ದಾರೆ ಎಂದು ವಿವರಿಸಿದರು.
ಡಿ.4 ಟ್ರಸ್ಟ್ ನೋಂದಣಿಯಾಗಲಿದೆ. ಇದೇ ವೇಳೆ ಸಂಜೆ ಟ್ರಸ್ಟ್ ಸ್ಥಾಪನೆ ಕುರಿತು ಸಾರ್ವಜನಿಕವಾಗಿ ಘೋಷಣೆ ಮಾಡುವ ಸಲುವಾಗಿ ನಗರದ ಸೆನೆಟ್ ಹಾಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ, ‘ಸತ್ಯ ನುಡಿಯುವ ಅನಿವಾರ್ಯತೆ’ ವಿಷಯ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಆಶಯ ಭಾಷಣ ಮಾಡಲಿದ್ದು, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಚಿಂತಕ ದೇವನೂರ ಮಹಾದೇವ, ಬಹುಭಾಷಾ ನಟ ಪ್ರಕಾಶ್ ರೈ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲೇಖಕಿ ಕೆ.ನೀಲಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.