×
Ad

ಮಡಿಕೇರಿ ನಗರ ಜೆಡಿಎಸ್ ಸಭೆ

Update: 2017-12-03 18:12 IST

ಮಡಿಕೇರಿ,ಡಿ.3:ಜಾತ್ಯಾತೀತ ವಾದದಿಂದ ಮಾತ್ರ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ.ಜೀ ವಿಜಯ, ಹಿಂದುತ್ವವಾದದ ಅತಿರೇಕದಿಂದ ಸಮಾಜದಲ್ಲಿ ಒಡಕು ಮೂಡುತ್ತಿರುವುದು ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ನಗರ ಜಾತ್ಯಾತೀತ ಜನತಾ ದಳದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಧರ್ಮಗಳ ಹೆಸರಿನಲ್ಲಿ ಮತಗಳಿಕೆಗಾಗಿ ಸಮಾಜವನ್ನು ಛಿದ್ರಗೊಳಿಸಲಾಗುತ್ತಿದ್ದು, ದೇಶದ ಇತ್ತೀಚೆಗಿನ ಬೆಳವಣಿಗೆಯನ್ನು ಗಮನಿಸಿದರೆ ಆತಂಕ ಸೃಷ್ಟಿಯಾಗುತ್ತಿದೆ ಎಂದರು.

ದೇಶದ ಪ್ರಧಾನಿ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪ್ರತಿನಿಧಿಗಳನ್ನು ಅಪ್ಪಿಕೊಳ್ಳುವ ಮೂಲಕ ಸ್ನೇಹಹಸ್ತ ಚಾಚುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳಿಗೂ ಪ್ರಧಾನಿ ಭೇಟಿ ಮಾಡಿ ಇದೇ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷದ ಮನೋಭಾವನೆ ಹೆಚ್ಚಾಗುತ್ತಿರುವುದನ್ನು ಪ್ರಧಾನಿ ಗಮನಿಸುತ್ತಿಲ್ಲವೆಂದು ಟೀಕಿಸಿದರು.

ಶಾಂತಿ, ಸಮಾರಸ್ಯ, ಸೌಹಾರ್ದತೆ ಹಾಗೂ ಜಾತ್ಯಾತೀತ ಮನೋಭಾವದಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬಹುದೆ ಹೊರತು ಕೇವಲ ಹಿಂದುತ್ವ ವಾದದಿಂದ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಉಡುಪಿಯಲ್ಲಿ ನಡೆದ ಹಿಂದೂ ಸಂಸತ್‍ನಲ್ಲಿ ಅಸ್ಪೃಶ್ಯತೆ ವಿರುದ್ಧ ಮಾತನಾಡಿದ್ದಾರೆ. ಆದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಹೋರಾಟದ ದಿನಗಳಲ್ಲೇ ಅಸ್ಪೃಶ್ಯತೆ ತೊಲಗಬೇಕೆಂದು ಪ್ರತಿಪಾದಿಸಿದ್ದರು ಎಂದು ಜೀವಿಜಯ ಹೇಳಿದರು. 

ದೇಶದಲ್ಲಿ ರಾಜಕೀಯ ಬದಲಾವಣೆಯ ಅಗತ್ಯವಿದ್ದು, ಈ ಬದಲಾವಣೆ ಕರ್ನಾಟಕದಿಂದಲೇ ಆರಂಭವಾಗಬೇಕು. ಪ್ರಾದೇಶಿಕ ಪಕ್ಷದಿಂದ ಮಾತ್ರ ಸ್ಥಳಿಯ ಸಮಸ್ಯೆಗಳಿಗೆ ಪರಿಹಾರ ಸುಲಭವಾಗಿ ಸಿಗುವುದರಿಂದ ಈ ಬಾರಿ ರಾಜ್ಯದ ಜನತೆ ಜೆಡಿಎಸ್‍ಗೆ ಅಧಿಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಹಣದಿಂದ ಅಧಿಕಾರ ಮತ್ತು ಅಧಿಕಾರದಿಂದ ಹಣ ಹೊಡೆಯುವ ಕಾರ್ಯ ಜೋರಾಗಿ ನಡೆಯುತ್ತಿದೆ ಎಂದು ಜೀವಿಜಯ ಟೀಕಿಸಿದರು. 
ಮಾಜಿ ಶಾಸಕ ಹೆಚ್.ಡಿ.ಬಸವರಾಜು ಮಾತನಾಡಿ, ರಾಷ್ಟ್ರೀಯ ಪಕ್ಷಗಳನ್ನು ಒದ್ದೋಡಿಸುವ ಮೂಲಕ, ಸ್ಥಳೀಯ ಭಾವನೆಗಳಿಗೆ ಒತ್ತು ನೀಡುವ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕೈ ಬಲಪಡಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕೆಂದರು.

ಜನ ಸಾಮಾನ್ಯರಲ್ಲಿ ಹಿಂದುತ್ವದ ಭಾವನೆಯನ್ನು ಭಿತ್ತಿ ಮತಗಳಿಸುವ ಮುಂದಾಗಿರುವವರನ್ನು ಹಾಗೂ ರಾಹುಲ್ ಗಾಂಧಿಯ ಮುಂದೆ ಕೈಕಟ್ಟಿ ನಿಲ್ಲುವ ಮೂಲಕ ಕರ್ನಾಟಕದವರನ್ನು ಗುಲಾಮರನ್ನಾಗಿಸಲು ಹೊರಟ ಮಂದಿಯನ್ನು ಮನೆಗೆ ಕಳiಹಿಸಿ ಜೆಡಿಎಸ್‍ನ್ನು ಬೆಂಬಲಿಸಿ ಎಂದು ಬಸವರಾಜು ಕರೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಮುಂಬರುವ ಚುಣಾವಣೆಯಲ್ಲಿ ಜಾತ್ಯಾತೀತ ಜನತಾ ದಳದ ತೆನೆಹೊತ್ತ ಮಹಿಳೆಯ ಜಯದ ಧ್ವಜ ಹಾರಿಸುವ ಕೆಲಸಕ್ಕೆ ಪೂರಕವಾಗಿ, ಈಗಿನಿಂದಲೆ ಪಕ್ಷದ ಕೆಲಸವನ್ನು ಕಾರ್ಯಕರ್ತರು ಅತ್ಯಂತ ಪರಿಶ್ರಮ ಮಾಡಬೇಕೆಂದು ಕರೆ ನೀಡಿದರು.

ಜಾತಿ, ಮತ, ಧರ್ಮಗಳ ಮೂಲಕ ಜನರನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿರುವ ರಾಷ್ಟ್ರೀಯ ಪಕ್ಷಗಳು ಕೊಡಗು ಜಿಲ್ಲೆಯನ್ನು ಮೈಲಿಗೆ ಮಾಡಿರುವುದಾಗಿ ಆರೋಪಿಸಿದರು. ಕೇಂದ್ರದ ಬಿಜೆಪಿಯ ಬಗ್ಗೆ ಜನರು ನಂಬುಗೆ ಕಳೆದುಕೊಂಡಿದ್ದಾರಾದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಡಗನ್ನು ಅನಾಥವನ್ನಾಗಿ ಮಾಡಿದೆ. ಕಾಂಗ್ರೆಸ್‍ನ ಇಲ್ಲಿಯವರೆಗಿನ ಆಡಳಿತಾವಧಿಯಲ್ಲಿ ಜಿಲ್ಲೆ ಐವರು ಉಸ್ತುವಾರಿ ಸಚಿವರನ್ನು ಕಂಡಿದೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ 30 ಕ್ಕೂ ಹೆಚ್ಚಿನ ಮಂದಿ ಜೀವ ಕಳೆದುಕೊಂಡಿದ್ದಾರೆ, ರೈತರ ಆತ್ಮಹತ್ಯಾ ಪ್ರಕರಣಗಳು ನಡೆದಿದೆಯಾದರು ಕಾಂಗ್ರೆಸ್ ಸರ್ಕಾರ ಸೂಕ್ತ ಸ್ಪಂದನ ನೀಡಿಲ್ಲ. ಜಿಲ್ಲೆಯ ಶಾಸಕರು ಕೈಕಟ್ಟಿ ಕುಳಿತ್ತಿದ್ದಾರೆ ಎಂದು ಸಂಕೇತ್ ಪೂವಯ್ಯ ಗಂಭೀರ ಆರೋಪ ಮಾಡಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಮುಂದಿನ ಚನಾವಣೆಯನ್ನು ಗುರಿಯಾಗಿಸಿಕೊಂಡು ಪ್ರತಿ ಮತಗಟ್ಟೆಯನ್ನು ಕ್ಷೇತ್ರವೆಂದು ಪರಿಗಣಿಸಿ ಕಾರ್ಯನಿರ್ವಹಿಸುವ ಮೂಲಕ ಈ ಕ್ಷೇತ್ರದ ಅಭ್ಯರ್ಥಿ ಜೀವಿಜಯ ಗೆಲುವಿಗೆ ಶ್ರಮಿಸಬೇಕು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಮತ್ತು ಜೀವಿಜಯ ಅವರು ಸಚಿವರಾಗಬೇಕು ಎನ್ನುವ ಗುರಿ ನಮ್ಮದು ಎಂದು ಸಂಕೇತ್ ಪೂವಯ್ಯ ಹೇಳಿದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ.ಎಂ.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಬಿ.ಎ. ಜೀವಿಜಯ ಅವರನ್ನು ಗೆಲ್ಲಿಸಿಯೇ ತೀರುವ ವಿಶ್ವಾಸ ವ್ಯಕ್ತಪಡಿಸಿದರು. ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾ.ಪಂಗಳಲ್ಲಿ ಜೆಡಿಎಸ್‍ನ್ನು ಬಲಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹೆಚ್.ಆರ್. ಸುರೇಶ್, ಜಿಲ್ಲಾ ವೀಕ್ಷಕ ಬಸವರಾಜು, ನಗರ ಜೆಡಿಎಸ್ ಅಧ್ಯಕ್ಷ ಬಿ.ವೈ.ರಾಜೇಶ್, ರಾಜ್ಯ ಉಪಾಧ್ಯಕ್ಷರಾದ ಮನೋಜ್ ಬೋಪಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News