ಬೆಳಗಾವಿ;ಜಿಲ್ಲೆಯಲ್ಲಿ ಹತ್ತಕ್ಕಿಂತ ಕಡಿಮೆ ಸ್ಥಾನ ಬಂದರೆ ರಾಜಕೀಯ ನಿವೃತ್ತಿ: ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ, ಡಿ. 3: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ 10ಕ್ಕಿಂತ ಕಡಿಮೆ ಸ್ಥಾನ ಪಡೆದರೆ ತಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಬಿಜೆಪಿಯ ಪರಿವರ್ತನಾ ಯಾತ್ರೆಯುದ್ದಕ್ಕೂ ಅವರು ಗಲಾಟೆ ಮಾಡಿಕೊಳ್ಳುತ್ತಿದ್ದು, ತೀವ್ರ ಹತಾಶಗೊಂಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದರು.
ಜಿಲ್ಲೆಯಲ್ಲಿ ಎರಡು-ಮೂರು ಕಡೆ ಬಿಟ್ಟರೆ ಬಿಜೆಪಿ ಪರಿವರ್ತನಾ ಯಾತ್ರೆ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಸಿಎಂ ಮತ್ತು ಸಚಿವರ ವಿರುದ್ಧ ಅತ್ಯಂತ ಕೀಳಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಜಾತಿ ರಾಜಕಾರಣ, ಜಾತಿ, ಧರ್ಮ, ಕೋಮು ಸಂಘರ್ಷಕ್ಕೆ ಅವಕಾಶವಿಲ್ಲ, ಅದು ನಡೆಯುವುದಿಲ್ಲ. ಆದರೂ, ಬಿಜೆಪಿಯವರು ಜಾತಿ ಸಂಘರ್ಷ ಸೃಷ್ಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಯತ್ನ ಫಲಿಸುವುದಿಲ್ಲ ಎಂದು ತಿರುಗೇಟು ನೀಡಿದರು.