ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಪ್ರವಾಸ
ಬೆಂಗಳೂರು, ಡಿ. 3: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿರುವ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಮುಖಂಡರು ಪ್ರವಾಸ ಕೈಗೊಳ್ಳಲು ತೀಮಾರ್ನಿಸಿದ್ದಾರೆ.
ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್, ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಪ್ರವಾಸ ಕೈಗೊಳ್ಳಲಿದ್ದು, ವಿವಿಧೆಡೆಗಳಲ್ಲಿ ಸಭೆ-ಸಮಾವೇಶಗಳನ್ನು ನಡೆಸಲು ನಿರ್ಧರಿಸಿದ್ದಾರೆ
ಪ್ರವಾಸ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸಲು ನಾಳೆ (ಡಿ.4) ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದು, ಡಿ. 5, 6 ಮತ್ತು 7ರಂದು ಮೂರು ದಿನಗಳ ಕಾಲ ಕೆಪಿಸಿಸಿ ಕಚೇರಿಯಲ್ಲಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಶಾಸಕರು, ಮುಖಂಡರು, ಮುಂಚೂಣಿ ಘಟಕಗಳ ಸಭೆ ನಡೆಸಲಿದ್ದಾರೆಂದು ಗೊತ್ತಾಗಿದೆ.
ಡಿ.10ರ ನಂತರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವ ನೂರು ಕ್ಷೇತ್ರಗಳಲ್ಲಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದ ಮುಖಂಡರು ಪ್ರವಾಸ ಕೈಗೊಳ್ಳಲಿದ್ದು, ನಾಳಿನ ಸಭೆಗಳಲ್ಲಿ ಪ್ರವಾಸದ ರೂಪುರೇಷೆಗಳು ಅಂತಿಮಗೊಳ್ಳಲಿವೆ ಎಂದು ಹೇಳಲಾಗಿದೆ.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್ ಸೇರಿದಂತೆ ಸ್ಥಳೀಯ ಮುಖಂಡರು ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.