ವಿಕಲಚೇತನರಿಗೆ ಸರಕಾರಿ ಹುದ್ದೆಗಳ ಮೀಸಲಾತಿ ಶೇ.4ರಷ್ಟು ಹೆಚ್ಚಳ: ಸಚಿವೆ ಉಮಾಶ್ರೀ

Update: 2017-12-03 13:18 GMT

ಬೆಂಗಳೂರು, ಡಿ.3: ಸರಕಾರದ ‘ಎ’ ಹಾಗೂ ‘ಬಿ’ ವೃಂದದ ಹುದ್ದೆಗಳಲ್ಲಿ ವಿಕಲಚೇತನರಿಗೆ ಶೇ.4ರಷ್ಟು ಮೀಸಲಾತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ರವಿವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ‘ಎ’ ಮತ್ತು ‘ಬಿ’ ವೃಂದದಲ್ಲಿ ಶೇ.3ರಷ್ಟು ಮೀಸಲಾತಿಯಿದೆ. ಅದನ್ನು ಶೇ.4ಕ್ಕೆ ಏರಿಸಬೇಕೆಂದು ವಿಕಲಚೇತನರು ಹಲವು ದಿನಗಳಿಂದ ಬೇಡಿಕೆ ಸಲ್ಲಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ ಶೇ.4ಕ್ಕೆ ಏರಿಕೆ ಮಾಡಲು ಕಾನೂನು ತಿದ್ದುಪಡಿ ಮಾಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಕುರಿತು ಸಭೆಗಳು ನಡೆಯುತ್ತಿದ್ದು, ಶೀಘ್ರವೇ ಮೀಸಲಾತಿಯನ್ನು ಹೆಚ್ಚಳ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

4 ಸಾವಿರ ಮೋಟರ್ ವಾಹನ: ಪ್ರತಿವರ್ಷ ವಿಕಲಚೇತನರಿಗೆ ಉಚಿತವಾಗಿ ಮೋಟಾರ್ ವಾಹನಗಳನ್ನು ವಿತರಿಸಲಾಗುತ್ತಿದೆ. 2014-15ರಲ್ಲಿ ಒಂದು ಸಾವಿರ ಮೋಟಾರ್ ವಾಹನ ವಿತರಿಸಲಾಗಿತ್ತು. 2016-17ರಲ್ಲಿ 2ಸಾವಿರಕ್ಕೆ ಹೆಚ್ಚಳ ಮಾಡಲಾಗಿತ್ತು. ಪ್ರಸ್ತುತ 2017-18ರ ಸಾಲಿನಲ್ಲಿ 4ಸಾವಿರ ಮೋಟಾರ್ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಕಲಚೇತನರು ವಿವಾಹ ಮಾಡಿಕೊಳ್ಳುವ ಸಂದರ್ಭದಲ್ಲಿ 50ಸಾವಿರ ರೂ. ಪ್ರೋತ್ಸಾಹ ಹಣ ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ವಿಕಲಚೇತನರು ವಿವಾಹದ ಭಾಗ್ಯವನ್ನು ಹೊಂದಲು ಸಾಧ್ಯವಾಗುತ್ತಿದೆ. ಹಾಗೂ ಅಂಧ ತಾಯಂದರಿಗೆ ಹುಟ್ಟುವ ಮಗುವನ್ನು ನೋಡಿಕೊಳ್ಳುವ ಪೋಷಕರಿಗೆ ಮಾಸಿಕ 2ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ವಿಕಲಚೇತನರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಮಾತನಾಡಿ, 2001ರ ಜನಗಣತಿಯಲ್ಲಿ 9.4ಲಕ್ಷ ವಿಕಲಚೇತನರಿದ್ದರೆ, 2011ರ ಜನಗಣತಿಯಲ್ಲಿ 13.2ಲಕ್ಷಕ್ಕೆ ಏರಿಕೆಯಾಗಿದೆ. 21ರೀತಿಯ ವಿಕಲತೆಯನ್ನು ಗುರುತಿಸಿರುವುದರಿಂದ ವಿಕಲಚೇತನರ ಜನಸಂಖ್ಯಾ ಪ್ರಮಾಣ ಹೆಚ್ಚಳವಾಗಿದೆ. ಇವರೆಲ್ಲರನ್ನು ಸಮಾಜ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಟಾಕಿಂಗ್ ಲ್ಯಾಪ್‌ಟಾಪ್:ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಹಾಗೂ ವಿಕಲಚೇತನ ವಿದ್ಯಾರ್ಥಿಗಳು ತಮ್ಮ ಶಾಲಾ -ಕಾಲೇಜುಗಳಿಗೆ ಕಟ್ಟಿರುವ ನೊಂದಾಣಿ ಶುಲ್ಕ, ಪರೀಕ್ಷಾ ಶುಲ್ಕ ಸೇರಿದಂತೆ ಎಲ್ಲ ರೀತಿಯ ಶುಲ್ಕವನ್ನು ಮರು ಪಾವತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬ್ರೈಲ್ ಕವನ ಸಂಕಲನ, ಬ್ರೈಲ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ಸಂಸ್ಥೆಗಳು, ವ್ಯಕ್ತಿಗಳು ಹಾಗೂ ವಿಶೇಷ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು.

‘ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಸಚಿವೆ ಉಮಾಶ್ರೀ ಮಾತನಾಡುತ್ತಿದ್ದಂತೆ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ಕಾರ್ಯಕರ್ತರು ವೇದಿಕೆಯ ಬಳಿ ಬಂದು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಇದರಿಂದ ವಿಚಲಿತರಾದ ಸಚಿವೆ ಉಮಾಶ್ರೀ, ವಿಕಲಚೇತನರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು. ವಿಕಲಚೇತನರ ದಿನಾಚರಣೆಯನ್ನು ಸಂತಸದಿಂದ ಆಚರಿಸಿ. ನಾಳೆ ನಿಮ್ಮ ಸಮಸ್ಯೆಗಳ ಕುರಿತು ಚರ್ಚೆ ಮಾಡೋಣವೆಂದು ಮನವಿ ಮಾಡಿದರು.

ವಿಕಲಚೇತನರ ಬೇಡಿಕೆಗಳು: ‘ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹಧನ ನೀಡಿ, ಸಾಧನೆ ಮತ್ತು ಪ್ರತಿಭೆ ಯೋಜನೆಯಡಿ ನೀಡುತ್ತಿರುವ ಕ್ರೀಡಾ ಪ್ರೋತ್ಸಾಹ ಧನವನ್ನು 50ಸಾವಿರ ರೂ.ನಿಂದ 1.50 ಲಕ್ಷ ರೂ.ಗೆ ಹೆಚ್ಚಳ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಕಲಚೇತನ ಕ್ರೀಡಾಪಟುಗಳಿಗೂ ಕ್ರೀಡಾ ವಿಮೆ ಸೌಲಭ್ಯ ಕಲ್ಪಿಸುವುದು. ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ರಚಿಸುವುದು. ವಿಕಲಚೇತನರು ಕೆಎಸ್ಸಾರ್ಟಿಸಿ ಬಸುಗಳಲ್ಲಿ ರಾಜ್ಯಾದ್ಯಂತ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News