ಕನ್ನಡಕ್ಕಾಗಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿರಾಕರಿಸಿದ ಡಾ.ಸಿದ್ಧಯ್ಯ ಪುರಾಣಿಕ: ವಿಜಯಾ

Update: 2017-12-03 13:40 GMT

ಬೆಂಗಳೂರು, ಡಿ.3: ಆಂಧ್ರಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ನಿರಾಕರಿಸಿ ಡಾ.ಸಿದ್ಧಯ್ಯ ಪುರಾಣಿಕ ಕನ್ನಡ ಸೇವೆ ಮಾಡಬೇಕೆಂದು ಕರ್ನಾಟಕಕ್ಕೆ ಹಿಂದಿರುಗಿ ಬಂದಂತಹ ಕನ್ನಡ ಪ್ರೇಮಿ ಎಂದು ಸಿದ್ಧಯ್ಯ ಪುರಾಣಿಕರ ಪುತ್ರಿ ವಿಜಯಾ ನಂದೀಶ್ವರ್ ಸ್ಮರಿಸಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಹೊಂಬಾಳೆ ಪ್ರತಿಭಾರಂಗದ ವತಿಯಿಂದ ಆಯೋಜಿಸಿದ್ದ ಡಾ.ಸಿದ್ಧಯ್ಯ ಪುರಾಣಿಕ ನೆನಪಿನಾರ್ಥ ಕವಿದನಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಚೆನ್ನಾರೆಡ್ಡಿ ಅವರ ಅಡಿಯಲ್ಲಿ ನನ್ನ ತಂದೆ ಕೆಲಸ ಮಾಡುತ್ತಿದ್ದರು. ಈ ವೇಳೆ ಕರ್ನಾಟಕ ಏಕೀಕರಣವಾದಾಗ ಹೈದರಾಬಾದ್ ಬಿಟ್ಟು ಕರ್ನಾಟಕಕ್ಕೆ ಬರಲು ನಿರ್ಧರಿಸಿದ್ದರು. ಆದರೆ, ಚೆನ್ನಾರೆಡ್ಡಿ ‘ನೀವು ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹವಾದ ಸ್ಥಾನದಲ್ಲಿ ಇದ್ದೀರಿ. ಇಲ್ಲಿಂದ ಹೋಗಬೇಡಿ’ ಎಂದು ಹೇಳಿದ್ದರು.

ಆದರೆ, ತಂದೆ ನನಗೆ ಉನ್ನತ ಹುದ್ದೆಗಿಂತ ಕರ್ನಾಟಕವೇ ಮುಖ್ಯ ಎಂದು ಅವರ ಮಾತನ್ನು ಕೇಳದೇ ಯಾದಗಿರಿ ಜಿಲ್ಲೆಗೆ ಬಂದರು. ಇದರಿಂದಾಗಿ ತಂದೆ ಉನ್ನತ ಹುದ್ದೆಯನ್ನು ಕಳೆದುಕೊಂಡರು. ಆದರೆ, ಕನ್ನಡ ನೆಲದಲ್ಲಿ ಇದ್ದೇವೆ ಎಂಬ ಸಂತೋಷ, ಆತ್ಮತೃಪ್ತಿ ಅವರಲ್ಲಿತ್ತು ಎಂದು ವಿಜಯಾ ನೆನಪಿಸಿಕೊಂಡರು.

 ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ನನ್ನ ತಂದೆ ಸಾಹಿತ್ಯವನ್ನು ಹಚ್ಚಿಕೊಂಡಿದ್ದರು. ಹೈದರಾಬಾದ್‌ನಲ್ಲಿದ್ದ ಸಂದರ್ಭದಲ್ಲಿ ಕನ್ನಡ ಸಂಘ ಕಟ್ಟಿ ಪ್ರತಿ ತಿಂಗಳು ಕನ್ನಡ ಕುರಿತ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇದರಿಂದಾಗಿ ನನಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ಹಿರಿಯ ಸಾಹಿತಿಗಳ ಪರಿಚಯವಾಯಿತು ಎಂದು ನೆನೆಸಿಕೊಂಡರು.

 ಸಾಹಿತಿ ಅ.ರಾ.ಮಿತ್ರ ಮಾತನಾಡಿ, ಮಾಡುವ ಕೆಲಸದಲ್ಲಿ ಶುದ್ಧ ಚಾರಿತ್ರ ಕಾಪಾಡಿಕೊಂಡಿದ್ದ ಹಾಗೂ ಕನ್ನಡ ಪ್ರೇಮಿಯಾಗಿದ್ದ ಡಾ.ಸಿದ್ಧಯ್ಯ ಪುರಾಣಿಕ ನಿಜವಾದ ಬಂಗಾರದ ಮನುಷ್ಯ. ಅವರು, ಉನ್ನತ ಅಧಿಕಾರಿಯಾಗಿದ್ದರೂ ಎಂದೂ ಯಾರನ್ನೂ ತಳಮಟ್ಟದಲ್ಲಿ ಕಂಡಿದವರಲ್ಲ. ಅಲ್ಲದೆ, ಅಧಿಕಾರದಲ್ಲಿದ್ದರೂ, ಆರ್ಥಿಕವಾಗಿ ಹಲವು ಜನರಿಗೆ ಸಹಾಯ ಮಾಡಿದ್ದಾರೆಂದು ಹೇಳಿದರು.

ಸಿದ್ಧಯ್ಯ ಪುರಾಣಿಕ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಎಲ್ಲರಿಗೂ ಏನು ಬೇಕು ಎಂದು ಕೇಳಿದ್ದರು. ಎಲ್ಲ ಮಕ್ಕಳೂ ಸ್ಲೇಟ್, ಬಳಪ ಬೇಕೆಂದರೆ, ಇವರು ಮಾತ್ರ ವಿದ್ಯೆ ಬೇಕು ಎಂದು ಕೇಳಿದ್ದರು. ಇದನ್ನು ಕಂಡ ಅಲ್ಲಿನ ಶಿಕ್ಷಕರು ಸಂತೋಷಗೊಂಡು ಮುಂದಿನ ದಿನಗಳಲ್ಲಿ ಸಿದ್ಧಯ್ಯರ ಶಾಲೆಯ ಎಲ್ಲ ಶುಲ್ಕಗಳ ಅವರೇ ಭರಿಸಿದರು. ಅಲ್ಲದೆ, ಅವರಿಗೆ ವಿದ್ಯಾರ್ಥಿ ವೇತನ ನೀಡಿ ಓದಲು ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿಕೊಂಡಿದ್ದರು ಎಂದು ಅ.ರಾ.ಮಿತ್ರ ನೆನಪಿಸಿಕೊಂಡರು.

ಯಾವುದೇ ವ್ಯಕ್ತಿ ತನ್ನ ಬದುಕಿನ ಅವಧಿಯಲ್ಲಿ ತನ್ನ ಹಿರಿಮೆಯನ್ನು ಎಷ್ಟು ಹಿಗ್ಗಿಸಲು ಸಾಧ್ಯವೋ ಅಷ್ಟನ್ನು ಸಿದ್ದಯ್ಯ ಬದುಕಿನಲ್ಲಿ ದೊಡ್ಡ ದೊಡ್ಡ ಕಾರ್ಯಗಳು ಮಾಡಿದ್ದಾರೆ. ಸಾಧಿಸುವ ವಿಶೇಷ ಆಸಕ್ತಿಯುಳ್ಳವರಾಗಿದ್ದು, ಉರ್ದು ಮತ್ತು ಪಾರ್ಸಿ ಭಾಷೆಯಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು. ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಉರ್ದು ಮತ್ತು ಪಾರ್ಸಿ ಪದಗಳ ವಿವರಣೆ ನೀಡುವ ಸಂದರ್ಭದಲ್ಲಿ ಸಿದ್ಧಯ್ಯ ವಿಶೇಷ ಕೊಡುಗೆ ನೀಡಿದ್ದಾರೆ ಎಂದ ಅವರು ತಿಳಿಸಿದರು.

ಅಧ್ಯಾಪಕರು ಎಂದ ಕೂಡಲೇ ಎಲ್ಲವೂ ನಮಗೆ ಗೊತ್ತೆಂಬ ಭಾವನೆಯಿರುತ್ತದೆ. ಇಂಗ್ಲಿಷ್ ಕಲಿತರಷ್ಟೇ ಎಲ್ಲ ಜ್ಞಾನವೂ ಸಿಗುವುದಿಲ್ಲ ಎಂದ ಅವರು, ಭಾಷೆ ಎಂದರೆ ಜೀವನ ವಿಧಾನ, ಸಾಂಸ್ಕೃತಿಕ ತಿರುಳು. ಹೀಗಾಗಿ, ಎಲ್ಲರೂ ಎಲ್ಲವನ್ನೂ ಕಲಿಯಬೇಕು. ಈ ನಿಟ್ಟಿನಲ್ಲಿ ಪುರಾಣಿಕ್ ಕನ್ನಡ ಕಿಚ್ಚನ್ನು ಹತ್ತಿಸಿಕೊಂಡಿದ್ದವರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ರುದ್ದೇಶ್ ಬಿ.ಅಂದರಂಗಿ ಉಪಸ್ಥಿತರಿದ್ದರು. ಈ ವೇಳೆ ದೇವೇಂದ್ರ ಕುಮಾರ್ ಮತ್ತು ಜಿ.ರಶ್ಮಿ ಗಾಯನ ಹಾಗೂ ಗಮಕ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News