ದಾಂದಲೆ: ಕಿಡಿಗೇಡಿಗಳ ಬಂಧನಕ್ಕೆ ಎಸ್‍ಡಿಪಿಐ ಒತ್ತಾಯ
ಚಿಕ್ಕಮಗಳೂರು,ಡಿ.3: ದತ್ತಾತ್ರೇಯ ಬಾಬಾಬುಡಾನ್ ಗಿರಿ ಬಳಿಯ ನಿಷೇಧಿತ ಪ್ರದೇಶದೊಳಗೆ ನುಗ್ಗಿ ದಾಂದಲೆ ನಡೆಸಿದ ಕಿಡಿಗೇಡಿಗಳನ್ನು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಸೈಯ್ಯದ್ ಅಜ್ಮತ್ ಒತ್ತಾಯಿಸಿದ್ದಾರೆ.
ಅವರು ಈ ಕುರಿತು ರವಿವಾರ ಹೇಳಿಕೆ ನೀಡಿದ್ದು, ನಿಷೇಧಿತ ಪ್ರದೇಶದೊಳಗೆ ದತ್ತಮಾಲಧಾರಿಗಳ ಪ್ರವೇಶ ಕಾನೂನು ಉಲ್ಲಂಘನೆಯಾಗಿದೆ. ಅದರೊಳಗೆ ನುಗ್ಗಿದ ಮಾಲಾಧಾರಿಗಳು ಕೇಸರಿ ಧ್ವಜ ಹಾರಿಸಿ ಅಲ್ಲಿದ್ದ ಗೋರಿಗಳಿಗೆ ಹಾನಿಯುಂಟು ಮಾಡಿರುವುದು ಖಂಡನೀಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಸಲ ದತ್ತ ಜಯಂತಿ ನಡೆಯುವ ಸಮಯದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದರೂ ನಿಷೇಧಿತ ಪ್ರದೇಶದೊಳಗೆ ನುಗ್ಗಿ ಕೇಸರಿ ಧ್ವಜ ಹಾರಿಸುವುದು ಅಲ್ಲಿ ದಾಂದಲೆ ನಡೆಸುವುದು ಸರ್ವೆ ಸಾಮಾನ್ಯವಾಗಿ ಹೋಗಿರುವಂತಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಅಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಿ ನಿಷೇಧಿತ ಪ್ರದೇಶದೊಳಗೆ ನುಗ್ಗದಂತೆ ಎಚ್ಚರವ ಹಿಸಿದ್ದರೆ ಇಂತಹ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕಳೆದ ಬಾರಿಯೂ ದತ್ತ ಜಯಂತಿ ಸಮಯದಲ್ಲಿ ಮಾಲದಾರಿಗಳಿಂದ ಅಹಿತಕರ ಘಟನೆಗಳು ನಡೆದಿದ್ದವು. ಇದನ್ನು ಮನಗಂಡು ಎಚ್ಚರ ವಹಿಸಬೇಕಿದ್ದ ಜಿಲ್ಲಾಡಳಿತ ಪುನಃ ಅಹಿತಕರ ಘಟನೆಗಳು ಮರುಕಳಿಸುವುದನ್ನು ತಡೆಯುವಲ್ಲಿ ವಿಫಲವಾಗಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಅಲ್ಲದೇ ಗೋರಿಗಳಿಗೆ ಹಾನಿಗೊಳಿಸಿ ಕೃತ್ಯದಲ್ಲಿ ಭಾಗಿಗಳಾದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.