ಚಿಕ್ಕಮಗಳೂರು ಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ
ಚಿಕ್ಕಮಗಳೂರು, ಡಿ.3: ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ರವಿವಾರ ಚಿಕ್ಕಮಗಳೂರು ನಗರದಲ್ಲಿ ಉದ್ವಿಗ್ನಗೊಂಡ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಎಸ್ಪಿ ಕೆ.ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲಿ ಕಿಡಿಗೇಡಿಗಳಿಂದ ಕೆಕೆಬಿ ಹೆಸರಿನ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಬಾಬಾಬುಡಾನ್‍ಗಿರಯಲ್ಲಿದ್ದ ಎಸ್ಪಿ ಅಣ್ಣಾಮಲೈ ಕೂಡಲೇ ನಗರಕ್ಕೆ ದೌಡಾಯಿಸಿದರು.
ಎಲ್ಲೆಡೆಯೂ ಅಘೋಷಿತ ಬಂದ್ ವಾತಾವರಣವಿದ್ದು, ನಗರದ ಶೃಂಗಾರ್ ವೃತ್ತದಲ್ಲಿ ಗುಂಪುಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು. ಈ ಸಮಯದಲ್ಲಿ ಕೆಲವರಿಗೆ ಲಾಠಿ ಏಟು ಬಿತ್ತು. ಅಲ್ಲದೆ ಉಪ್ಪಳ್ಳಿ-ಇಂದಾವರ ರಸ್ತೆ ಬಳಿ ಗುಂಪುಗೂಡಿದ್ದ ಜನರು ಕಲ್ಲು ತೂರಾಟ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದರು.
ಚಿಕ್ಕಮಗಳೂರು ನಗರದಾದ್ಯಂತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ದತ್ತಮಾಲಾದಾರಿಗಳನ್ನು ನಗರದಿಂದ ಹೊರಗೆ ಕಳುಹಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಉಲ್ಲಂಘಿಸಿ ಗುಂಪು ಕಟ್ಟಿಕೊಂಡು ಗಲಾಟೆಗೆ ಕಾರಣವಾದರೆ ಕ್ರಮ ಜರುಗಿಸುವುದಾಗಿ ಎಸ್ಪಿ ಅಣ್ಣಾಮಲೈ ಎಚ್ಚರಿಕೆ ನೀಡಿದ್ದಾರೆ.