×
Ad

ಸಿದ್ದರಾಮಯ್ಯ ಮೊದಲು ತಮ್ಮ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ: ಅನಂತ್ ಕುಮಾರ್ ಹೆಗಡೆ ಸವಾಲು

Update: 2017-12-03 22:13 IST

ಮೈಸೂರು,ಡಿ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊದಲು ತಮ್ಮ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ನಂತರ ಗುಜರಾತ್ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸವಾಲು ಹಾಕಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್‍ನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ  ಸಿದ್ದರಾಮಯ್ಯ ಅವರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಸಿದರು.

ಗುಜರಾತ್‍ನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತರಪ್ರದೇಶದಲ್ಲಿ ಬಂದಂತೆಯೇ ಇಲ್ಲಿಯೂ ಫಲಿತಾಂಶ ಬರಲಿದೆ. ಮತದಾರರು ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಜನತೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪಪ್ಪು. ಅವರ ಬಗ್ಗೆ ಹೆಚ್ಚು ಮಾತನಾಡಿದರೆ ಸಮಯ ವ್ಯರ್ಥವಾಗುತ್ತದೆ. ಅವರಿಂದ ಜನರು ದೂರ ಸರಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹುಣಸೂರು ತಾಲೂಕಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಅನಂತಕುಮಾರ ಹೆಗಡೆ ಕಿಡಿಕಾರಿದರು.

ಕೌಶಲ್ಯ ಅಭಿವೃದ್ಧಿಗೆ ಚಾಲನೆ: ಸೋಮವಾರ ಮೈಸೂರಿನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಚಾಲನೆ ನೀಡಲಾಗುವುದು. ಈ ತರಬೇತಿಯ ಪ್ರಮುಖ ಅಂಶಗಳನ್ನು ಐಡಿಯಾ ಎಂಟರ್‍ಪ್ರೈಸಸ್ ಲಿಮಿಟೆಡ್ ಸದಸ್ಯರ ಜೊತೆ ಚರ್ಚಿಸಲಾಗುವುದು ಎಂದರು.

ಇಲ್ಲಿಯವರೆಗೆ 1.5 ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಸಂಕಲ್ಪ ಯೋಜನೆಯಡಿಯಲ್ಲಿ ಐಟಿಐ ಹಾಗೂ ಪಾಲಿಟೆಕ್ನಿಕ್ ಅಭಿವೃದ್ಧಿ ಪಡಿಸಲಾಗುವುದು. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಸರ್ವೇ ಪ್ರಕಾರ ಮುಂದಿನ 20 ವರ್ಷಗಳಲ್ಲಿ ಶೇ.67ರಷ್ಟು ಉದ್ಯೋಗದ ಕ್ಷೇತ್ರವೇ ಬದಲಾಗಲಿದೆ. 2018ರ ಅಂತ್ಯದೊಳಗೆ ದೇಶದ ಎಲ್ಲಾ ಸ್ಥಳಗಳಲ್ಲೂ ಕೇಂದ್ರ ಸ್ಥಾಪನೆಯ ಗುರಿ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News