×
Ad

ಕಾನೂನು ಸುವ್ಯವಸ್ಥೆ ಕೆಡಿಸಲು ಅಮಿತ್ ಶಾ ಸೂಚನೆ ನೀಡಿದ್ದನ್ನು ಪ್ರತಾಪ್ ಸಿಂಹ ಪಾಲಿಸಿದರೇ?

Update: 2017-12-04 13:27 IST

ಬೆಂಗಳೂರು, ಡಿ.4: ಹುಣಸೂರಿನಲ್ಲಿ ಹನುಮ ಜಯಂತಿಯ ಅಂಗವಾಗಿ ಮೆರವಣಿಗೆ ನಡೆಸಲು ಮುಂದಾಗಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದ ವೇಳೆ ಪೊಲೀಸ್ ಬ್ಯಾರಿಕೇಡ್ ಗೆ ಕಾರಿನಿಂದ ಗುದ್ದಿ ಸಂಸದರು ಪರಾರಿಯಾಗಿದ್ದರ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೀಡಿದ್ದ ನಿರ್ದೇಶನ ಕೆಲಸ ಮಾಡಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇದಕ್ಕೆ ಪೂರಕ ಎಂಬಂತೆ ಫೇಸ್ಬುಕ್ ನಲ್ಲಿ ಪ್ರತಾಪ್ ಸಿಂಹ ಅವರು ಸ್ವತಃ ನೀಡಿದ ಹೇಳಿಕೆಯೊಂದು ವೈರಲ್ ಆಗುತ್ತಿದ್ದು, ಈ ಕೃತ್ಯಕ್ಕೆ ಅಮಿತ್ ಷಾ ನೀಡಿದ್ದ ಸೂಚನೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಫೇಸ್ಬುಕ್ ನಲ್ಲಿ ನವೆಂಬರ್ 30ರಂದು ಲೈವ್ ನೀಡಿದ್ದ ಪ್ರತಾಪ್ ಸಿಂಹ, “ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾಗ ಬಿಜೆಪಿಯ ಎಲ್ಲಾ ಮೋರ್ಚಾಗಳ ಸಭೆ ಕರೆದಿದ್ದರು. ಅಲ್ಲಿ ಯುವ ಮೋರ್ಚಾದೊಂದಿಗೆ ಕಳೆದ ಕೆಲವು ದಿನಗಳಲ್ಲಿ ನೀವು ಏನೆಲ್ಲಾ ಪ್ರತಿಭಟನೆ ನಡೆಸಿದ್ದೀರಿ ಎಂದು ಪ್ರಶ್ನಿಸಿದರು. ನಾವು ನಡೆಸಿದ ಪ್ರತಿಭಟನೆಗಳ ವಿವರ ನೀಡಿದೆವು. ಆಗ ಅಮಿತ್ ಶಾ ಯುವ ಮೋರ್ಚಾ ಉಗ್ರ ಪ್ರತಿಭಟನೆ ನಡೆಸಬೇಕು. ಪ್ರತಿಭಟನೆಯ ಸಂದರ್ಭ ಟಿಯರ್ ಗ್ಯಾಸ್ ಒಡೆದದ್ದು, ಲಾಠಿ ಚಾರ್ಚ್ ಆಗಿದ್ದು ನಡೆದಿದೆಯೇ ಎಂದು ಪ್ರಶ್ನಿಸಿದೆವು. ನಾನು ಇಲ್ಲ ಎಂದು ಹೇಳಿದ್ದಕ್ಕೆ ಈ ತರದಲ್ಲಿ ಮಾಡಬೇಕು ಎಂದವರು ಹೇಳಿದರು” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಬೆಂಗಳೂರಿಗೆ ಅಮಿತ್ ಷಾ ಭೇಟಿ ನೀಡಿದ್ದ ಸಂದರ್ಭ ಪ್ರತಾಪ್ ಸಿಂಹರನ್ನು ತರಾಟೆಗೆತ್ತಿಕೊಂಡಿದ್ದಾರೆ ಎನ್ನುವ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಈ ಸ್ಪಷ್ಟನೆ ನೀಡಿದ್ದರು. ನವೆಂಬರ್ 30ರಂದು ಪ್ರತಾಪ್ ಸಿಂಹ ಈ ಲೈವ್ ನೀಡಿದ್ದು, ಡಿಸೆಂಬರ್ 3ರಂದು ಅಂದರೆ ರವಿವಾರ ಸಂಸದರು ಹುಣಸೂರಿನಲ್ಲಿ ಪೊಲೀಸ್ ಬ್ಯಾರಿಕೇಡನ್ನು ಕಾರಿನಿಂದ ಗುದ್ದಿ ಪರಾರಿಯಾಗಿದ್ದರು. ಆದ್ದರಿಂದ ನಿನ್ನೆ ನಡೆದ ಅಹಿತಕರ ಘಟನೆಗಳು, ಬ್ಯಾರಿಕೇಡನ್ನು ಕಾರಿನಿಂದ ಗುದ್ದಿ ಕಾನೂನು ಉಲ್ಲಂಘಿಸಿರುವುದು ಅಮಿತ್ ಷಾ ನೀಡಿದ ಸೂಚನೆಯ ಪಾಲನೆಯೇ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News