×
Ad

ಸಿಎಂ ಸಿದ್ಧರಾಮಯ್ಯ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ: ಕೇಂದ್ರ ಸಚಿವ ಅನಂತಕುಮಾರ್

Update: 2017-12-04 22:00 IST

ಮೈಸೂರು,ಡಿ.4: ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಅನಂತ ಕುಮಾರ್ ಆರೋಪಿಸಿದರು.

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಣಸೂರಿನಲ್ಲಿ ಹನುಮಜಯಂತಿಗೆ ಅನುಮತಿ ನೀಡಿಲ್ಲ. ಟಿಪ್ಪು ಜಯಂತಿ,  ಈದ್ ಮಿಲಾದ್ ಮೆರವಣಿಗೆ ನಡೆಯಬಹುದು. ಆದರೆ ಹುನುಮ ಜಯಂತಿಗೆ ಮರೆವಣಿಗೆ ಮಾತ್ರ ಮಾಡಬಾರದು ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ಪುರಾಣದಲ್ಲಿ ಕರ್ನಾಟಕವನ್ನು ಹುನುಮನ ನಾಡಿ ಎಂದು ಕರೆದಿದ್ದಾರೆ. ಕರ್ನಾಟಕದಲ್ಲಿ ಕೋಮು ಸೌಹಾರ್ದತೆ ಕದಡಲು ಮುಖ್ಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಿದ್ದಾರೆ.  ಹಿಂದುಗಳ ಕಾರ್ಯಕ್ರಮಕ್ಕೆ ನಿಷೇಧ ಹೇರಿ, ತಡೆಯೊಡ್ಡಲಾಗುತ್ತಿದೆ. ರಾಜ್ಯ ಸರಕಾರ  ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಿದೆ. 19 ಹಿಂದು ಯುವಕರ ಕಗ್ಗೊಲೆಯಾಗಿದೆ. ಹತ್ಯೆಯ ಹಿಂದೆ ಹಲವು ಸಂಘಟನೆಗಳ ಕೈವಾಡವಿದ್ದರೂ  ರಾಜ್ಯ ಸರ್ಕಾರ ಸುಮ್ಮನಿದೆ. ಹತ್ಯೆಯಾದವರ ಮನೆಗೆ ಸೌಜನ್ಯಕ್ಕೂ  ಸಿದ್ದರಾಮಯ್ಯ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ಹನುಮನ ಭಕ್ತರನ್ನು ಬಂಧಿಸಲಾಗಿದೆ.  ಅದರಲ್ಲೂ ಸಂಸದ ಪ್ರತಾಪ್ ಸಿಂಹರನ್ನೂ ಬಂಧಿಸಲಾಗಿದೆ. ಸಂಸದರನ್ನು ಬಂಧನ ಮಾಡಿದ ಕೂಡಲೇ ಸಭಾಪತಿಗೆ ದೂರು ನೀಡಬೇಕು. ಇದರ ಬಗ್ಗೆ ನಾವು ಸುಮ್ಮನಿರಲ್ಲ, ಹೋರಾಟ ಮಾಡುತ್ತೇವೆ. ಡಿಸೆಂಬರ್ ನಲ್ಲಿ ನಡೆಯುವ ಸಂಸತ್ ನಲ್ಲಿಯೂ ಸಹ ಇದರ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಸಿಎಂ ಸಿದ್ದು ಕಣ್ಣಿಗೆ ಕಾಮಾಲೆಯಾಗಿದೆ. ಹನುಮ ಜಯಂತಿ ಮಾಡಿಯೇ ಮಾಡುತ್ತೇವೆ. ಮುಂದಿನ ನಿರ್ಧಾರಗಳನ್ನು ನಾವು ತಿಳಿಸುತ್ತೇವೆ.  ನಮ್ಮ ಧಾರ್ಮಿಕ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ನಾನು ಯಾವ ಪೊಲೀಸರ ಕರ್ತವ್ಯಕ್ಕೂ ಅಡಿ ಮಾಡಿಲ್ಲ. ಬಿಳಿಕೆರೆ ಬಳಿ ಸಾರ್ವಜನಿಕರನ್ನೂ ಅನುಮಾನದಿಂದ ತಪಾಸಣೆ ಮಾಡಲಾಗುತ್ತಿತ್ತು. ಅದನ್ನು ಪ್ರಶ್ನಿಸಿ ನಾನೇ ಡ್ರೈವ್ ಮಾಡಿಕೊಂಡು ಹುಣಸೂರಿಗೆ ಹೊರಟೆ. ನನ್ನ ಕಾರಿಗೆ ಬ್ಯಾರಿಕೇಡ್ ಸಿಕ್ಕಿಕೊಂಡು ಎಳೆದುಕೊಂಡು ಹೋಯಿತು. ಅದನ್ನೇ ಪೊಲೀಸರು ದೊಡ್ಡದು ಮಾಡಿ ಕೇಸ್ ಹಾಕಿದ್ದಾರೆ. ನಾನು ಅದಕ್ಕೆ ಕೇರ್ ಮಾಡಲ್ಲ. ಎಂದು ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News