×
Ad

ಪ್ರತಾಪ ಸಿಂಹರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-12-04 22:16 IST

ಹೊಸದಿಲ್ಲಿ, ಡಿ. 4: ಸಂಸದ ಪ್ರತಾಪ್ ಸಿಂಹ ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಮಾತ್ರವಲ್ಲ, ರಾಜಕೀಯ ಪ್ರಬುದ್ಧತೆಯೂ ಇದ್ದಂತಿಲ್ಲ. ಸಂಸದೀಯ ಭಾಷೆಯೂ ಅವರಿಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರನ್ನು ‘ಗೂಂಡಾರಾವ್’ ಎಂದು ಟೀಕಿಸಿದ್ದಾರೆ. ಇದನ್ನು ನೋಡಿದರೆ ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂಬುದು ಸ್ಪಷ್ಟ ಎಂದು ಟೀಕಿಸಿದರು.

ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಸರಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಹನುಮ ಜಯಂತಿ ನಡೆಸಲು ನಮ್ಮ ಸಹಮತವಿದೆ. ಮೆರವಣಿಗೆ ನಡೆಸಲು ಪೋಲಿಸರು ತಿಳಿಸಿದ ಮಾರ್ಗದಲ್ಲಿ ಸಾಗಿದರೆ ಅಭ್ಯಂತರವಿರಲಿಲ್ಲ.ಇದನ್ನು ಹೊರತುಪಡಿಸಿ, ಬೇರೆ ಮಾರ್ಗದಲ್ಲಿ ಸಾಗಲು ಅವಕಾಶ ನೀಡದೆ ಇರುವುದೆ ನಿನ್ನೆಯ ಘಟನೆಗೆ ಕಾರಣ. ನಾವು ಮನುಷ್ಯ ಧರ್ಮದಲ್ಲಿ ನಂಬಿಕೆ ಇಟ್ಟಿರುವವರು. ಬಿಜೆಪಿಗೆ ಕೋಮುವಾದಿ ಮೇಲೆ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ದೂರಿದರು.

ಗುಜರಾತ್ ಚುನಾವಣೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಲ್ಲಿನ ಜನತೆಗೆ ಹೆಚ್ಚು ವಿಶ್ವಾಸ ಇಟ್ಟಿದ್ದು, ನಮ್ಮ ಪಕ್ಷ ಗೆಲ್ಲುವ ವಿಶ್ವಾಸ ನನಗಿದೆ ಎಂದ ಸಿದ್ದರಾಮಯ್ಯ, ಯಡಿಯೂರಪ್ಪ ರಾಜ್ಯ ಕಂಡ ಅತೀ ಭ್ರಷ್ಟ ಮುಖ್ಯಮಂತ್ರಿ, ಚೆಕ್ ಮೂಲಕ ಲಂಚ ತೆಗೆದುಕೊಂಡು, ಲಂಚವನ್ನು ಸಮರ್ಥಿಸಿಕೊಳ್ಳುತ್ತಿರುವ ಮನುಷ್ಯ ಎಂದು ವಾಗ್ದಾಳಿ ನಡೆಸಿದರು.

ಸೌಲಭ್ಯ ವಿತರಣೆ: ಮನೆ-ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸರಕಾರದ ಸೌಲಭ್ಯ ವಿತರಣೆಗೆ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ತಾನು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಲಿದ್ದೇನೆ, ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದ ಅವರು, ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ‘ಸಿಟ್’ ತನಿಖೆ ನಡೆಸುತ್ತಿದೆ. ಈ ವಿಚಾರ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶದ ಅನ್ವಯ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದರು.

ಒಂದು ಕುಟುಂಬಕ್ಕೆ ಒಂದೆ ಟಿಕೆಟ್ ಎಂಬುದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ವೈಯಕ್ತಿಕ ಅಭಿಪ್ರಾಯ. ಅಧ್ಯಕ್ಷರ ಹೇಳಿಕೆಗೆ ನನ್ನ ಸಹಮತವಿದೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಎಲ್ಲಕ್ಕಿಂತ ಮೊದಲು ಗೆಲ್ಲುವ ಮಾನದಂಡ ಮುಖ್ಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News