ಜ.1ರಿಂದ ಹೊಸ ತಾಲೂಕುಗಳು ಅಸ್ತಿತ್ವಕ್ಕೆ : ಕಾಗೋಡು ತಿಮ್ಮಪ್ಪ
ಬೆಂಗಳೂರು, ಡಿ.4: ಹೊಸ 50 ತಾಲೂಕುಗಳು ಹಾಗೂ ಒಂದು ಸಾವಿರ ಕಂದಾಯ ಗ್ರಾಮಗಳು ಮುಂದಿನ ಸಾಲಿನ ಜನವರಿ 1ರಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಾಲೂಕುಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಒಂದು ಸಾವಿರ ತಾಂಡಾ, ಹಟ್ಟಿಗಳು ಜ.1ರಂದೆ ಕಂದಾಯ ಗ್ರಾಮಗಳಾಗಿ ಜಾರಿಗೆ ಬರಲಿದೆ ಎಂದರು.
ಈಗಾಗಲೆ 600 ಗ್ರಾಮಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದ ಗ್ರಾಮಗಳು ಅಧಿಸೂಚನೆಯನ್ನು ಶೀಘ್ರವೆ ಹೊರಡಿಸಲಾಗುವುದು. ಜನವರಿ 1ರಿಂದ ಅಧಿಕೃತವಾಗಿ ಒಂದು ಸಾವಿರ ಕಂದಾಯ ಗ್ರಾಮಗಳು ಜಾರಿಗೆ ಬರಲಿವೆ ಎಂದು ಅವರು ಹೇಳಿದರು.
ತಾಂಡಾ, ಹಾಡಿ, ಹಟ್ಟಿ ಸೇರಿದಂತೆ ಇನ್ನಿತರ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ‘ವಾಸಿಸುವವನೆ ಮನೆಯೊಡೆಯ ಯೋಜನೆ’ಯಡಿಯಲ್ಲಿ ಆ ಗ್ರಾಮಗಳಲ್ಲಿ ವಾಸಿಸುವವರಿಗೆ ಫೆಬ್ರವರಿಯಿಂದ ಹಕ್ಕುಪತ್ರ ವಿತರಣೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯ ಸರಕಾರ ಘೋಷಣೆ ಮಾಡಿರುವ 50 ಹೊಸ ತಾಲೂಕುಗಳ ಜತೆಗೆ ಇನ್ನೂ 8-10 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಬೇಕೆಂಬ ಬೇಡಿಕೆಯೂ ಇದೆ. ಈ ಸಂಬಂಧ ಸರಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಭೂ ಮಂಜೂರಾತಿ ನಿಯಮಾವಳಿ ಪ್ರಕಾರ ಒಂದು ಗ್ರಾಮದಲ್ಲಿ ನೂರು ಜಾನುವಾರು ಇದ್ದರೆ ಮೂವತ್ತು ಎಕರೆ ಗೋಮಾಳ ಇರಬೇಕು. ಇತ್ತೀಚೆಗಷ್ಟೇ ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದೆವು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ವಜಾಗೊಂಡಿದ್ದು, ನಾಳೆಯಿಂದಲೆ ಸಾಗುವಳಿ ಪತ್ರ ವಿತರಣೆ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಪ್ರತಿ ತಾಲೂಕಿನಲ್ಲಿ ವಾರಕ್ಕೊಮ್ಮೆ ಸಭೆ ಕರೆದು ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಮೊದಲ ಸಭೆ ನಡೆದ 15 ದಿನಗಳ ಬಳಿಕ ಎರಡನೆ ಸಭೆ ನಡೆಸಬೇಕು. ಇಬ್ಬರು ಸದಸ್ಯರು ಇದ್ದರೂ ಸಭೆ ನಡೆಸಬೇಕು ಎಂದು ಸೂಚನೆ ನೀಡಿದ್ದೇನೆ. ಶಾಸಕರು ಈ ವಿಚಾರದಲ್ಲಿ ಉದಾಸೀನ ಮಾಡದೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಹಕ್ಕುಪತ್ರ ನೀಡಿದ ತಕ್ಷಣವೇ ಆರ್‌ಟಿಸಿಯಲ್ಲಿ ವಿವರ ದಾಖಲು ಮಾಡಬೇಕೆಂಬ ನಿಯಮವಿದೆ. ಆದರೂ, ಸುಮಾರು ಎರಡೂವರೆ ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಮಡಿಕೇರಿಯಿಂದ ರಾಜ್ಯಪ್ರವಾಸ ಆರಂಭಿಸಿ, ಅರ್ಜಿಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.
ಚುನಾವಣೆ ಸುಲಭವಾಗಿದ್ದರೆ ಬಡವರಿಗೆ ಹಕ್ಕುಪತ್ರಗಳನ್ನು ನೀಡಲು ಯಾಕೆ ಇಷ್ಟು ವಿಳಂಬವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೋರಾಟ, ಜನಸಂಘಟನೆ ಮಾಡಿದ್ದರೆ ಅಧಿಕಾರಕ್ಕೆ ಬಂದಾಗ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
ಸ್ಪರ್ಧೆ ಬಗ್ಗೆ ಪಕ್ಷದ ತೀರ್ಮಾನಕ್ಕೆ ಬದ್ಧ : 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಚುನಾವಣೆ ಎಂಬುದು ದಂಧೆಯೂ ಅಲ್ಲ, ಉದ್ಯಮವೂ ಅಲ್ಲ. ಸಮಾಜ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಪುತ್ರಿ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಅವರನ್ನೆ ಕೇಳಬೇಕು. ನನ್ನ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ. ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ, ಸೋಲು-ಗೆಲುವು ಕಂಡಿದ್ದೇನೆ. ರಾಜಕೀಯ ಕ್ಷೇತ್ರ ಸಮಾಜಸೇವೆಯ ಮುಖವಾಗಿರಬೇಕು. ಚುನಾವಣೆ ಸಾಂದರ್ಭಿಕ ಆಕಸ್ಮಿಕವಾದದ್ದು.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ