'ಮಕ್ಕಳ ಸಂರಕ್ಷಣೆ ಮತ್ತು ಕಾನೂನುಗಳ ಅನುಷ್ಠಾನದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ' ಕುರಿತು ಕಾರ್ಯಾಗಾರ

Update: 2017-12-04 18:00 GMT

ಮಂಡ್ಯ,ಡಿ.4: ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಮಾಜಿಕವಾಗಿಯೂ ಎಲ್ಲರ ಮೇಲೆ ಜವಾಬ್ದಾರಿ ಇದೆ ಎಂದು ಜಿಪಂ ಸಿಇಒ ಬಿ.ಶರತ್ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ಪಂದನ ಸಂಸ್ಥೆ ಬೆಳಗಾವಿ ಹಾಗೂ ಯುನಿಸೆಫ್ ಮಕ್ಕಳ ಸಂರಕ್ಷಣಾ ಘಟಕ ವತಿಯಿಂದ 'ಮಕ್ಕಳ ಸಂರಕ್ಷಣೆ ಮತ್ತು ಕಾನೂನುಗಳ ಅನುಷ್ಠಾನದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ಕುರಿತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪೊಲೀಸರು, ಇಲಾಖೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡಾಗ ಇಂಥ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಇಂಥ ಕಾರ್ಯಾಗಾರಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು 
ಸಮಾಜದ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪೊಲೀಸರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಂತ್ರಸ್ತ ಮಕ್ಕಳ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವ ಅಗತ್ಯವಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಶೋಷಣೆಗೊಳಪಟ್ಟವರನ್ನು ಹೆದರಿಸುವುದು. ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಮಾಡುವುದನ್ನು ಬಿಟ್ಟು ಅವರಿಗೆ ಧೈರ್ಯ ತುಂಬಿ, ರಕ್ಷಣೆ ನೀಡುವ ಮೂಲಕ ಅವರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಸಮಾಜದಲ್ಲಿ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು. ಆ ಸಂದರ್ಭದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿರಲಿಲ್ಲ. ಎಲ್ಲರೂ ಒಟ್ಟಾಗಿ ಇರುತ್ತಿದ್ದರಿಂದ ಯಾರೂ ಖಿನ್ನತೆಗೆ ಒಳಗಾಗುವಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಈಗ ವಿಭಕ್ತ ಕುಟುಂಬಗಳು ಹೆಚ್ಚಾಗಿ ಜನ ಖಿನ್ನತೆಗೊಳಗಾಗುತ್ತಿದ್ದಾರೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ.ಎಸ್.ದಿವಾಕರ್ ಮಾತನಾಡಿ, ಪ್ರಸ್ತುತ ಪೊಲೀಸ್ ಇಲಾಖೆಯ ಬಗ್ಗೆ ಇರುವ ಭಯದ ವಾತಾವರಣ ಹೋಗಬೇಕು. ಪೊಲೀಸರ ಬಗ್ಗೆ ಇರುವ ಅಪನಂಬಿಕೆ ಬಿಟ್ಟು ನಂಬಿಕೆ ಇಡಬೇಕು. ದೌರ್ಜನ್ಯಗಳು ನಡೆದಾಗ ಸಂತ್ರಸ್ತರು ಯಾರಿಗೂ ಹೆದರದೆ ಪೊಲೀಸರಿಗೆ ದೂರು ನೀಡಬೇಕು. ನಮಗೂ ಮಾಹಿತಿ ನೀಡಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.

ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಲು 37 ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕರಿಸಬೇಕು. ಎಲ್ಲ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಿದರೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹಗಳನ್ನು ತಡೆಗಟ್ಟಬಹುದು ಎಂದರು.

ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಕೂಡಲೇ ಚಿಕಿತ್ಸೆ ನೀಡುವ ಹಾಗೂ ಅವರಿಗೆ ಇಲಾಖೆಯಿಂದ ನೆರವು ನೀಡಲು ಅನೇಕ ಯೋಜನೆಗಳಿವೆ. ಮಕ್ಕಳಿಗೆ ಬೇಕಾದ ಅಗತ್ಯ ನೆರವು ಸಹ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್.ನಿಶ್ಚಲ, ಯುನಿಸೆಫ್‍ನ ಪ್ರಾದೇಶಿಕ ಸಂಯೋಜಕ ರಾಘವೇಂದ್ರಭಟ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಆಲಿಪುರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಇನ್ಸ್‍ಪೆಕ್ಟರ್ ರವೀಂದ್ರ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News