×
Ad

ಮಡಿಕೇರಿ : ಸಂಸದ ಪ್ರತಾಪ್ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಅಸಮಾಧಾನ

Update: 2017-12-04 23:47 IST

ಮಡಿಕೇರಿ,ಡಿ.4 :ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟು ಕಾನೂನನ್ನು ಗೌರವಿಸಬೇಕಾದ ಸಂಸದ ಪ್ರತಾಪ್ ಸಿಂಹ ಅವರು ಹುಣಸೂರಿನಲ್ಲಿ 144ಸೆಕ್ಷನ್ ಜಾರಿಯಲ್ಲಿದ್ದರೂ ಸ್ವತಃ ಸರ್ಕಾರಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲಿಸಿ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಯುವ ಕಾಂಗ್ರೆಸ್‍ನ ಅಧ್ಯಕ್ಷರಾದ ಎಸ್.ಪಿ.ಹನೀಫ್ ಸಂಪಾಜೆ, ಸಂಸದರ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

 ಪತ್ರಿಕಾ ಹೇಳಿಕೆ ನೀಡಿರುವ ಹನೀಫ್, ಶಾಂತಿ, ಸಹಬಾಳ್ವೆ, ನೆಮ್ಮದಿಗೆ ಹೆಸರಾದ ಮೈಸೂರಿನ ಜನತೆಯಲ್ಲಿ ಭಾವನಾತ್ಮಕ ವಿಷಯಗಳನ್ನು ಭಿತ್ತಿ ಅಶಾಂತಿ ಮೂಡಿಸುವ ಮೂಲಕ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರನ್ನು ಸಂತೃಪ್ತಿ ಪಡಿಸುವುದಕ್ಕಾಗಿ ಸಂಸದ ಪ್ರತಾಪಸಿಂಹ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಡಗಿನ ಧೀಮಂತ ವ್ಯಕ್ತಿ, ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರನ್ನು ಗೂಂಡಾ ಎಂದು ಸಂಭೋದಿಸಿರುವುದು ಪ್ರತಾಪ್ ಸಿಂಹ ಅವರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಕೂಡ ಯುವ ಕಾಂಗ್ರೆಸ್ ಖಂಡಿಸಲಿದ್ದು, ಸಂಸದರ ವರ್ತನೆ ಹೀಗೆ ಮುಂದುವರೆದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹನೀಫ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News