ಸಂಸದ ಪ್ರತಾಪ್‌ಸಿಂಹ ಗಡಿಪಾರಿಗೆ ದಸಂಸ ಒತ್ತಾಯ

Update: 2017-12-05 14:58 GMT

ಹುಣಸೂರು, ಡಿ.5: ಜನರೆದುರು ಬೆತ್ತಲಾದರೂ ಬಂಡತನ ಪ್ರದರ್ಶಿಸುತ್ತಿರುವ ಸಂಸದ ಪ್ರತಾಪ್‌ಸಿಂಹರನ್ನು ಗಡಿಪಾರು ಮಾಡಿ, ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ ಅವರದೇ ಪಕ್ಷದ ಸಂಸದರಾಗಿದ್ದೂ ಕ್ಷೇತ್ರಕ್ಕಾಗಲಿ, ರಾಜ್ಯಕ್ಕಾಗಲಿ ಯಾವುದೇ ಅಭಿವೃದ್ಧಿಗೆ ಅನುದಾನ ತರಲು ವಿಫಲವಾಗಿರುವ ಸಂಸದ ಪ್ರತಾಪ್‌ಸಿಂಹ ಸಂಸದರಾಗಿ ಸುಳ್ಳು ಹೇಳುತ್ತಲೇ ಕಾಲಹರಣ ಮಾಡಿದ್ದಾರೆ. ಈಗ ತನ್ನ ಪಕ್ಷದ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಹನುಮ ಜಯಂತಿ ನೆಪದಲ್ಲಿ ಕೋಮುಗಲಭೆ ಸೃಷ್ಟಿಸಿ, ಜನತೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಜನಪ್ರತಿನಿಧಿಯಾಗಿ ಸಮಾನತೆ, ಸಹಬಾಳ್ವೆಗೆ ಆದ್ಯತೆ ನೀಡಬೇಕಾದ ಸಂಸದರು ಉದ್ದೇಶ ಪೂರ್ವಕವಾಗಿ ಸಮಾಜ ಒಡೆಯಲು, ಅರಾಜಕತೆ ಸೃಷ್ಟಿಸಲು ಹನುಮ ಜಯಂತಿಯನ್ನು ನೆಪಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ. ಇವರು ಸಂಸದರಾಗುವುದಕ್ಕೂ ಹಿಂದೆ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಯಾವುದೇ ಸಮುದಾಯಗಳಿಗೆ ತಮ್ಮ ಆಚರಣೆಯಿಂದ ಭಾವೈಕ್ಯಕ್ಕೆ ತೊಂದರೆಯಾಗದಂತೆ ಆಚರಣೆಯನ್ನು ನಡೆಸಲಾಗುತ್ತಿತ್ತು. ಆದರೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋದ ನಂತರ ಚಿಕ್ಕಮಗಳೂರು, ಹುಣಸೂರು ಹಾಗೂ ರಾಜ್ಯಾದ್ಯಾಂತ ವಿವಾದ ಸೃಷ್ಟಿಸಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಾಪ್‌ಸಿಂಹ ತಾವು ಜನಪ್ರತಿನಿಧಿಯೆನ್ನುವುದನ್ನೇ ಮರೆತು ದೇವರಾಜ ಅರಸುರವರ ನಾಡಿನಲ್ಲಿ ಅಶಾಂತಿ ನೆಲೆಯಾಗುವಂತೆ ಮಾಡುತ್ತಿದ್ದಾರೆಂದು ಟೀಕಿಸಿದರು.

ಇಂತಹ ದುಷ್ಕೃತ್ಯಗಳಿಗೆ ದುರ್ಬಲ ಸಮುದಾಯದ ಮಕ್ಕಳನ್ನು ಹಣದ ಅಮಿಷ ತೋರಿಸಿ ಬಳಸಿಕೊಂಡು ಹನುಮ ಮಾಲೆ ಧರಿಸಲು ಪ್ರೇರೇಪಿಸಲಾಗಿದೆ. ಒಂದೇ ದಿನಕ್ಕೆ ಮುಗಿಯುತ್ತಿದ್ದ ಜಯಂತಿಯನ್ನು ಮೂರು ದಿನಗಳ ಕಾಲ ಆಚರಿಸಿ ಕಾನೂನು ಉಲ್ಲಂಘಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಕೂಡಲೆ ಸಂಸದ ಪ್ರತಾಪ್‌ಸಿಂಹರನ್ನು ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಸಂಸದ ಸ್ಥಾನದಿಂದ ವಜಾ ಮಾಡಬೇಕೆಂದು ಅವರು ಒತ್ತಾಯಿಸಿದರು.

 ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ರಾಜು ಚಿಕ್ಕಹುಣಸೂರು, ಸಂಘಟನಾ ಡೇವಿಡ್, ಮಹದೇವ ಬೀರನಹಳ್ಳಿ, ಮಹದೇವಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News