ಬಾಬಾಬುಡಾನ್‍ಗಿರಿ ಮತ್ತು ವಿವಿಧಡೆ ಗಲಬೆ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಚಿಕ್ಕಮಗಳೂರು, ಡಿ.5: ಬಾಬಾಬುಡಾನ್‍ಗಿರಿ ಹಾಗೂ ನಗರದ ವಿವಿಧಡೆ ನಡೆದ ಅಹಿತಕರ ಘಟನೆಗಳಿಗೆ ಕಾರಣರಾದವರ ವಿರುದ್ಧ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾಚಾರ್ಯ ಆಗ್ರಹಿಸಿದರು.
ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದತ್ತಜಯಂತಿ, ಈದ್‍ಮಿಲಾದ್ ಸಂದರ್ಭದಲ್ಲಿ ವಾಸ್ತವ್ಯ ಹೂಡ ಬೇಕಿದ್ದ ಸಚಿವ ಆರ್.ರೋಷನ್ ಬೇಗ್ ಕಾಣೆಯಾಗಿದ್ದಾರೆ. ಚಿಕ್ಕಮಗಳೂರೆಂದರೆ ಸರ್ಕಾರಕ್ಕೆ ನಿರ್ಲಕ್ಷ್ಯದ ಜಿಲ್ಲೆ. ಮಾಹಿತಿ ಇಲ್ಲದವರು, ಅಭಿವೃದ್ಧಿ ಮಾಡ ಬೇಕೆಂಬ ಇಚ್ಛೆ ಇಲ್ಲದವರು ಜಿಲ್ಲಾ ಸಚಿವರಾಗಿ ಬರುತ್ತಾರೆಂದು ದೂರಿದರು.ಸ್ಥಳೀಯ ಶಾಸಕ ಸಿ.ಟಿ.ರವಿ ಗಲಾಟೆಗೆ ಪ್ರಚೋದನೆ ನೀಡುತ್ತಾ ಅಭಿವೃದ್ಧಿ ಕೆಲಸ ಮಾಡದೆ ಜನ ರಿಂದ ದೂರವಾಗಿದ್ದಾರೆ. ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲ. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸದೆ ನಾಯಕರಾಗಿ ಬೆಳೆಯುವುದು ಸರಿ ಅಲ್ಲ ಎಂದರು.
ಧರ್ಮದ ಹೆಸರಿನಲ್ಲಿ ಮತ ಗಳಿಸುತ್ತಿರುವ ಶಾಸಕ ರವಿಗೆ ಅಭಿವೃದ್ಧಿ ಕುರಿತು ಚಿಂತೆ ಇಲ್ಲ. ನಗರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ನಿವೇಶನ ರಹಿತರಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂದಿಗೂ ಪರಿಹರಿಸಿಲ್ಲ. ಸರ್ಕಾರದ ಹಣ ಕೂಡ ದುರ್ಬಳಕೆ ಆಗುತ್ತಿದೆ. ಧಾರ್ಮಿಕ ಕಾರ್ಯ ಕ್ರಮಗಳ ಸಂದರ್ಭದಲ್ಲಿ ಸೀರೆ ಹಂಚಿ ಪ್ರಚೋದನೆಗೊಳಿಸು ವುದು ಸರಿಯಲ್ಲವೆಂದರು.
ಮುಖಂಡ ಬಿ.ಅಮ್ಜದ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಭಾವೈಕ್ಯತಾ ರ್ಯಾಲಿ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಪಿಐ ಸಹ ಕಾರ್ಯದರ್ಶಿ ರಾಧಾ ಸುಂದರೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ವಿಜಯಕುಮಾರ್ ಹಾಜರಿದ್ದರು.