ಡಿ.8 ರಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ “ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ” ಕೃತಿ ಬಿಡುಗಡೆ
ಮೈಸೂರು, ಡಿ. 5: ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್ ಅವರ “ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ” ಕೃತಿಯನ್ನು ಡಿ.8ರಂದು ಸಂಜೆ 4.30ಕ್ಕೆ, ಕಲಾಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸುವರು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ವಡ್ಡಗೆರೆ ಚಿನ್ನಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವಾಸು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾಗಿಯಾಗುವರು, ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್, ಕೃತಿ ಕುರಿತು ಮಾತನಾಡುವರು ಎಂದು ಹೇಳಿದರು.
ಸಚಿವರಾದ ತನ್ವೀರ್ ಸೇಠ್, ಗೀತಾ ಮಹದೇವ ಪ್ರಸಾದ್, ಸಂಸದರಾದ ಪ್ರತಾಪ್ ಸಿಂಹ, ಆರ್.ಧ್ರುವನಾರಾಯಣ, ಸಿ.ಎಸ್.ಪುಟ್ಟರಾಜು, ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಕಳಲೆ ಕೇಶವಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಕೃತಿ ರಚನೆ ಬಗ್ಗೆ ಅನಿಸಿಕೆ ಹಂಚಿಕೊಂಡು, ಪುಸ್ತಕದಲ್ಲಿ ರಾಜಮನೆತನ ಕುಟುಂಬ ರಾಜಕಾರಣ ಸೇರಿದಂತೆ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಸುಮಾರು 5 ದಶಕಗಳ ರಾಜಕಾರಣದ ಕೂತೂಹಲ ಸ್ವಾರಸ್ಯಕರ ಸಂಗತಿಗಳು ದಾಖಲಾಗಿವೆ. ಅಂದಿನ ರಾಜಕಾರಣಿಗಳ ಏಳುಬೀಳುಗಳು, ಅವರುಗಳ ಗೆಲುವು- ಸೋಲಿಗೆ ಕಾರಣ, ಚುನಾವಣೆಯಲ್ಲಿದ್ದ ಗಾಡ್ ಪಾಧರ್ ಯಾರು? ಎಷ್ಟೇಷ್ಟು ಮತ ಪಡೆದರು, ರಾಜಕಾರಣಿಗಳಿಗಿರುವ ಮೌಡ್ಯ, ಮೂಡನಂಬಿಕೆ, ಕಂದಾಚಾರಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ ಎಂದು ಹೇಳಿದರು.
ಮಂತ್ರಿಯಾದವರು ಸೋತವರು, ಗೆದ್ದವರು, ಅತಿ ಹೆಚ್ಚು ಬಾರಿ ಆಯ್ಕೆಯಾದವರು,ಹ್ಯಾಟ್ರಿಕ್, ಡಬಲ್ ಹ್ಯಾಟ್ರಿಕ್ ಪಡೆದವರು, ಕುಟುಂಬ ರಾಜಕಾರಣ, ರಾಜಕೀಯ ಸ್ಥಿತ್ಯಂತರಗಳ ಜೊತೆಗೆ, ಚಾಮರಾಜನಗರ, ಚಾಮರಾಜಕ್ಕೆ ರಾಜ್ಯದಲ್ಲಿ, ಮೈಸೂರಿಗೆ ಕೇಂದ್ರದಲ್ಲಿ ಮಂತ್ರಿಗಿರಿ ಸಿಗದಿರುವ ಬಗ್ಗೆ ಸ್ವಾರಸ್ಯಕರ ಸಂಗತಿಗಳು ಸೇರಿದಂತೆ ಎರಡು ಜಿಲ್ಲೆಗಳ ಸಮಗ್ರ ರಾಜಕಾರಣವನ್ನು ಕಟ್ಟಿಕೊಡುವ ಪ್ರಯತ್ನ ನಡೆಸಲಾಗಿದೆ, ಸುಮಾರು 728 ಪುಟಗಳಲ್ಲಿ ಮೂಡಿರುವ ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಲಾಗಿದ್ದು ಪ್ರತಿಯೊಬ್ಬರಿಗೂ ಮಾಹಿತಿಯ ಕಣಜವಾಗಿದೆ ಎಂದು ತಿಳಿಸಿದರು.
ಯುವ ಪತ್ರಕರ್ತರು ಶಿಸ್ತು, ಸಂಯಮ, ಸಮಯ ಪಾಲನೆ, ಆರೋಗ್ಯಪೂರ್ಣ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಸುಬ್ರಮಣ್ಯ, ಮಾ.ವೆಂಕಟೇಶ್ ಇದ್ದರು.