ಗೋರಿಗಳ ಧ್ವಂಸ ಪೂರ್ವ ಯೋಜಿತ ಕೃತ್ಯ: ಎಸ್‌ಡಿಪಿಐ
ಕೋಲಾರ, ಡಿ. 5: ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿ ನಿಷೇಧಿತ ಪ್ರದೇಶದೊಳಗೆ ಬಜರಂಗದಳದ ಕಾರ್ಯಕರ್ತರು ನುಗ್ಗಿ ಗೋರಿಗಳ ಬಳಿ ನಡೆಸಿರುವ ದಾಂದಲೆ ಪೂರ್ವ ಯೋಜಿತ ಕೃತ್ಯವಾಗಿದ್ದು, ಇಂತಹ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರು ಮಂಗಳವಾರ ನಗರದಲ್ಲಿ ಧರಣಿ ನಡೆಸಿದರು. ಚಿಕ್ಕಮಗಳೂರು ಸಮೀಪದ ಬಾಬಾ ಬುಡಾನ್ ಗಿರಿಯಲ್ಲಿ ಬಜರಂಗದಳದ ಕಾರ್ಯಕರ್ತರು ನಿಷೇಧಿತ ಪ್ರದೇಶದೊಳಗೆ ಅಕ್ರಮವಾಗಿ ನುಗ್ಗಿ ಎರಡು ಗೋರಿಗಳನ್ನು ಧ್ವಂಸ ಮಾಡಿರುವ ಘಟನೆ ಪೂರ್ವ ಯೋಜಿತ ಕೃತ್ಯವಾಗಿದೆ. ಈ ನಿಗದಿತ ದತ್ತಮಾಲೆ ಯಾತ್ರೆಯ ಮುಂಚಿತವಾಗಿಬಜರಂಗದಳದ ನಾಯಕರು ಬಹಿರಂಗವಾಗಿ ಬಾಬರಿ ಮಸೀದಿಯನ್ನು ಒಡೆದು ಉರುಳಿಸಿದಂತೆ ಬಾಬ ಬುಡಾನ್ ಗಿರಿ ದರ್ಗಾವನ್ನು ಧ್ವಂಸ ಮಾಡಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಪ್ರಚೋಧನಕಾರಿ ಹೇಳಿಕೆ ನೀಡಿದ್ದರು. ಹೀಗಿದ್ದರೂ ಚಿಕ್ಕಮಗಳೂರು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಬಜರಂಗಿಗಳನ್ನು ಬಂಧಿಸದೆ ನಿರ್ಲಕ್ಷಿಸಿರುವುದೇ ಈ ದಾಂದಲೆಗೆ ಮುಖ್ಯ ಕಾರಣ ಎಂದು ಈ ವೇಳೆ ಧರಣಿ ನಿರತ ಮುಖಂಡರು ಆರೋಪಿಸಿದರು.
ಕೆಲ ಕೋಮುವಾದಿ ಕಿಡಿಗೇಡಿಗಳು ಈ ಪೈಶಾಚಿಕ ಕೃತ್ಯ ಮಾಡುವ ಮೂಲಕ ರಾಜ್ಯದಲ್ಲಿ ಕೋಮುಗಲಭೆ ಸೃಷ್ವಿಸುವ ಸಂಚು ಹೂಡಿದ್ದರು. ಇದಕ್ಕೆ ಪುಷ್ಟಿಯಾಗಿ ಬಿಜಿಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನದಂತೆ ಭವಿಷ್ಯದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವುದಕ್ಕೂ ಈ ಘಟನೆಗೂ ಗಾಢ ಸಂಬಂಧ ಇದೆ. ಬಾಬ ಬುಡಾನ್ ಗಿರಿಯಲ್ಲಿರುವ ಮುಸ್ಲಿಂ ಸಮುದಾಯದ ವಕ್ಫ್ ಅಸ್ತಿಯ ಮೇಲೆ ಸಂಘಪರಿವಾರ ಕಣ್ಣಿಟ್ಟು ಈ ಕೃತ್ಯಗಳನ್ನು ಮಾಡಿಸುತ್ತಿದೆ. ಇದು ನಾಡಿನ ಕೋಮುಸೌಹಾರ್ದಕ್ಕೆ ಧಕ್ಕೆ ತಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಸುವ ಷಡ್ಯಂತ್ರದ ಒಂದು ಭಾಗವಾಗಿದೆ ಎಂದು ಆರೋಪಿಸ ಪಕ್ಷದ ಮುಖಂಡರು, ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನೆಗೆ ಕಾರಣಕರ್ತರಾದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಶಾಮೀರ್‌ಪಾಶ, ಝಮಾಲ್ ಅಹ್ಮದ್ ಶರೀಫ್, ಯಾಸೀನ್‌ಖಾನ್, ಮುಹಮ್ಮದ್ ಉಸ್ಮಾನ್, ಪಿಎಫ್‌ಐನ ಫೈರೋಝ್ ಖಾನ್, ಝುಬೇರ್ ಅಹ್ಮದ್, ಸೈಯದ್ ನವಾಝುದ್ದೀನ್, ಇದಾಯತ್ತುಲ್ಲಾ ಶರೀಫ್, ಸೈಯದ ತೌಸಿಫ್ ಉಪಸ್ಥಿತರಿದ್ದರು.