ವೀರಾಜಪೇಟೆ: ಕಳ್ಳನ ಬಂಧನ, ಸೊತ್ತು ವಶ
ಮಡಿಕೇರಿ, ಡಿ.5: ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಹಾಗೂ ಹೊಟೇಲ್‌ಗಳಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ನಿವಾಸಿ ಅಬ್ದುಲ್ ಸಲಾಂ ಅಲಿಯಾಸ್ ಸುರೇಶ್(40) ಎಂಬಾತನೆ ಬಂಧಿತ ವ್ಯಕ್ತಿ ಎನ್ನಲಾಗಿದೆ. ಈತನಿಂದ 2ಸಾವಿರ ರೂ. ಸೇರಿದಂತೆ ಒಟ್ಟು 20 ಸಾವಿರ ರೂ. ಮೌಲ್ಯದ 3 ಮೊಬೈಲ್, 1ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ಸಲಾಂ ಮಸೀದಿಗೆ ಪ್ರಾರ್ಥನೆ ಮಾಡಲು ತೆರಳಿ, ಅಲ್ಲಿ ಕಾಣಿಕೆ ಪೆಟ್ಟಿಗೆ ಇರುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ರಾತ್ರಿಯ ವೇಳೆ ಸಮಯ ಸಾಧಿಸಿ ಕಳ್ಳತನ ಮಾಡುತ್ತಿದ್ದ. ಹಾತೂರು, ಅಮ್ಮತ್ತಿ, ನಾಪೊಕ್ಲು ಸಮೀಪದ ಕೊಟ್ಟಮುಡಿ ಗ್ರಾಮದ ಮಸೀದಿ ಸೇರಿದಂತೆ ಕೆಲವು ಹೋಟೆಲ್‌ಗಳಲ್ಲಿ ಕಳ್ಳತನ ನಡೆಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಕಳೆದ ನ. 29ರಂದು ವೀರಾಜಪೇಟೆಯ ಮಲ ಬಾರ್ ರಸ್ತೆಯಲ್ಲಿನ ದಿನಸಿ ಮಳಿಗೆ, ಹೊಟೇಲ್‌ನಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಹೊಟೇಲ್ ಮಾಲಕ ಸಿ.ಬಿ. ಮುಹಮ್ಮದ್ ನೀಡಿದ ದೂರು ಹಾಗೂ ಅಮ್ಮತ್ತಿ ಮಸೀದಿಯಲ್ಲಿ ನಡೆದ ಕಳ್ಳತನದ ಬಗ್ಗೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಅಬ್ದುಲ್ ಸಲಾಂ ಅಲಿಯಾಸ್ ಸುರೇಶ್‌ನ ಬಗ್ಗೆ ಸುಳಿವು ಪೊಲೀಸರಿಗೆ ದೊರಕಿತ್ತು. ಇದನ್ನು ಆಧರಿಸಿ ಕಡಂಗದಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ, ವೀರಾಜಪೇಟೆ ನಗರ ವೃತ್ತ ನಿರೀಕ್ಷಕರಾದ ಕುಮಾರ್ ಆರಾಧ್ಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಕಾಶ್ಯಪ್, ಸಿಬ್ಬಂದಿಯಾದ ಸಾಬು, ಸುನಿಲ್ ಎಂ.ಜಿ., ರಜನ್‌ಕುಮಾರ್, ಮುನೀರ್ ಪಿ.ಯು. ಹಾಗೂ ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.