×
Ad

ನಗರಸಭೆಯಲ್ಲಿ ಅಧಿಕಾರಿಗಳಿಂದ ಅವ್ಯವಹಾರ ಆರೋಪ

Update: 2017-12-05 23:01 IST

ಕಾರವಾರ, ಡಿ.5: ನಗರಸಭೆಯಲ್ಲಿ ಅವ್ಯವಹಾರ ನಡೆಸುತ್ತಿರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಸೂಚಿಸಬೇಕು ಎಂದು ನಗರಸಭೆಯ ಚುನಾಯಿತ ಪ್ರತಿನಿಧಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ನಗರಸಭೆಯ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮೋಹನರಾಜು ನಗರಸಭೆಯ ಅನೇಕ ಸಾಮಗ್ರಿಗಳ ಖರೀದಿಯಲ್ಲಿ ಹಾಗೂ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಿದ ತಾಂತ್ರಿಕ ಅನುಮೋದನೆಗೆ ವಿರುದ್ಧವಾಗಿ ಬಹುಮಹಡಿ ಕಟ್ಟಡಗಳಿಗೆ ಆಸ್ತಿ ಸಂಖ್ಯೆಯನ್ನು ನೀಡುವ ಮೂಲಕ ಅವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದಿನ ಸಾಮಾನ್ಯ ಸಬೆಯಲ್ಲಿ ಚರ್ಚಿಸಿ ಠರಾವು ಮಾಡಲಾಗಿತ್ತು. ಆದರೆ ನಗರಸಭೆಯ ಅಧಿಕಾರಿ ಗಳ ಮೇಲೆ ಲೋಕಾಯುಕ್ತ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಇದರಿಂದಾಗಿ ಅವರ ಅವ್ಯವಹಾರಗಳು ಇನ್ನೂ ಮುಂದುವರಿದಿದೆ ಎಂದು ದೂರಿದರು.

ಆದ ಕಾರಣ ಅವರನ್ನು ಅಮಾನತ್ತಿನಲ್ಲಿಟ್ಟು ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಎಲ್ಲರೂ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಜಿಲ್ಲಾಧಿಕಾರಿಗೆ ನಗರಸಬೆಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲು ಅಧಿಕಾರ ಇರುವುದಿಲ್ಲ. ಅದು ಸರಕಾರದ ಮಟ್ಟದಲ್ಲಿ ಆಗಬೇಕು. ಆದರೆ ಈಗ ನೀಡಿರುವ ಮನವಿ ಹಾಗೂ ದೂರುಗಳ ಅನ್ವಯ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುಮದು ಎಂದು ತಿಳಿಸಿದರು.

ಈ ಸಂದರ್ದಲ್ಲಿ ನಗರಸಬೆ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ನೇಹಾ ನಾಯ್ಕ, ರತ್ನಾಕರ ನಾಯ್ಕ, ಸಂದೀಪ ತಳೇಕರ್, ಸಂತೋಷ ನಾಯ್ಕ, ರಮೇಶ ಗೌಡ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News