ಪೇಜಾವರ ಶ್ರೀ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2017-12-05 17:37 GMT

ಸೊರಬ, ಡಿ. 5: ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ಪೇಜಾವರ ಶ್ರೀ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಸಂವಿಧಾನ ಬದಲಿಸಿ ಎಂಬ ಹೇಳಿಕೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.

  ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ಶ್ರೇಷ್ಠವಾಗಿದ್ದು, ಅದಕ್ಕೆ ರಾಜಕಾರಣಿಗಳು, ಸ್ವಾಮೀಜಿಗಳು ಎನ್ನದೇ ಎಲ್ಲರೂ ಸಮಾನರು. ಅಂತಹ ಸಂವಿಧಾನ ಬದ್ಧ ಸಂಸತ್ತನ್ನು ಧಿಕ್ಕರಿಸಿ ಉಡುಪಿಯಲ್ಲಿ ತಮ್ಮದೇ ಆದ ಧರ್ಮ ಸಂಸದ್ ನಡೆಸಿ ಸಂವಿಧಾನ ಆಶಯಕ್ಕೆ ವಿರೋಧವಾದ ವಿಚಾರಗಳನ್ನು ಜಾರಿಗೆ ತರಬೇಕೆಂದು ಪೇಜಾವರ ಶ್ರೀ ಚರ್ಚೆ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹೋದರತೆ, ಸಮಾನತೆ, ಸಾಮಾಜಿಕ ನ್ಯಾಯವನ್ನು ಒಳಗೊಂಡು ಅಂಬೇಂಡ್ಕರ್ ರಚಿಸಿದ ಸಂವಿಧಾನ ಅವರಿಗೆ ಸಹ್ಯವಾಗಿಲ್ಲ. ಅದಕ್ಕಾಗಿ ಸನಾತನವಾದ ಆಧರಿಸಿದ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರ ನಡೆಸಿದ್ದಾರೆ. ಇದೇ ಆಶಯಗಳನ್ನು ಹೊಂದಿದ ರಾಜಕೀಯ ಪಕ್ಷಕ್ಕೆ ಪೇಜಾವರ ಶ್ರೀ ಬೆಂಬಲಿಸುತ್ತಿರುವುದರಿಂದ ಅಂಬೇಡ್ಕರ್ ಬಗ್ಗೆ ಅವರಿಗೆ ಅಸಹನೆ ಇದೆ ಎಂದು ಕಿಡಿಕಾರಿದರು.

ಸಾಮಾಜಿಕ ನ್ಯಾಯ, ಮೀಸಲಾತಿ ಬಗ್ಗೆ ಆಕ್ಷೇಪವಿರುವ ಪೇಜಾವರ ಶ್ರೀ ಖಾವಿಯ ಒಳೆ ರಕ್ಷಣೆ ಪಡೆದು ಈ ರೀತಿ ಕುತಂತ್ರ ಮಾಡುವುದನ್ನು ನಿಲ್ಲಿಸಬೇಕು. ಇಂತವರಿಗೆ ಜನರ ಅಭಿವೃದ್ಧಿಗಿಂತ ರಾಮ ಮಂದಿರದ ನಿರ್ಮಾಣವೇ ಮುಖ್ಯವಾಗಿ ಜನರ ಮತ ಪಡೆಯುವ ಒಳ ಸಂಚು ರೂಪಿಸಿರುವುದನ್ನು ಖಂಡಿಸಬೇಕು ಎಂದು ಹರಿಹಾಯ್ದರು.

ಜಾತ್ಯತೀತದ ಬಗ್ಗೆ ಕಳಕಳಿ ಸಂವಿಧಾನದ ಬಗ್ಗೆ ಗೌರವ ಇದ್ದದ್ದೇ ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೂಡಲೇ ಪೇಜಾವರ ಶ್ರೀ ಅವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅರಳಸುರಳಿ, ತಾಲೂಕು ಸಂಚಾಲಕ ಶಾಮಣ್ಣ ತುಡಿನೀರು ಹಾಗೂ ಪುರುಶೋತ್ತಮ ಗುಡ್ಡೆಕೊಪ್ಪ, ಫಕ್ಕೀರಪ್ಪ, ಪೀರ್ ಸಾಬ್, ನಾಗಪ್ಪ, ಹಬೀಬ್ ಸಾಬ್, ಮೆಹಬೂಬ್‌ಅಲಿ, ರಾಘವೇಂದ್ರ, ಪರಸಪ್ಪ, ಮಂಜಪ್ಪ, ಮರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News