ಕಡೂರು: ಮದಗದ ಕೆರೆಯ ನೀರು ಖಾಲಿ ಮಾಡದಂತೆ ಮೀನುಗಾರರ ಸಂಘ ಒತ್ತಾಯ

Update: 2017-12-05 17:41 GMT

ಚಿಕ್ಕಮಗಳೂರು, ಡಿ.5: ತೂಬು ದುರಸ್ತಿ ಕಾಮಗಾರಿ ನೆಪದಲ್ಲಿ ಕಡೂರು ತಾಲೂಕು ಹೊಸ ಮದಗದ ಕೆರೆಯ ನೀರನ್ನು ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ಖಾಲಿ ಮಾಡಬಾರದು ಎಂದು ಟ್ರೈಬಲ್ ಮೀನುಗಾರರ ಸಹಕಾರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರನ್ನು ಮಂಗಳ ವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕಳೆದ ನಾಲ್ಕೈದು ವರ್ಷಗಳಿಂದ ಆ ಭಾಗದಲ್ಲಿ ಸತತ ಬರಗಾಲವಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರಸ್ತುತ ಕೆರೆಯಲ್ಲಿ 60 ಅಡಿಗಳಷ್ಟು ನೀರಿದ್ದು, ತೂಬು ರಿಪೇರಿ ಯ ನೆಪದಲ್ಲಿ ಅದನ್ನು ಸಂಪೂರ್ಣ ಖಾಲಿ ಮಾಡಿದರೆ ಅದೇ ಕೆರೆಯನ್ನು ನಂಬಿ ಬದುಕುತ್ತಿರುವ ಸುತ್ತಮುತ್ತಲ 9 ಹಳ್ಳಿಗಳ ರೈತರು ಮತ್ತು ಜನ ಜಾನುವಾರುಗಳಿಗೆ ನೀರಿಲ್ಲದಂತಾಗುತ್ತದೆ ಎಂದರು.

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರಿಲ್ಲದಂತಾದರೆ ಕೃಷಿ ಚಟುವಟಿಕೆಗಳಿಗೆ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂದ ಅವರು ಈಗಾಗಲೇ ಸಂಘದ ಸದಸ್ಯರು 10 ಲಕ್ಷ ರೂ. ಬೆಲೆಯ ಮೀನು ಮರಿಗಳನ್ನು ಕೆರೆಯಲ್ಲಿ ಬಿಡಲಾಗಿದ್ದು, ನೀರಿಲ್ಲದಂತಾದರೆ ಅವು ಸಾಯುವುದರಿಂದ ಸಂಘಕ್ಕೆ ನಷ್ಟವುಂಟಾಗುತ್ತದೆ ಎಂದು ತಿಳಿಸಿದರು.

ಕೆರೆ ತೂಬು ದುರಸ್ತಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಕೆರೆಯ ಪೂರ್ತಿ ನೀರನ್ನು ಖಾಲಿ ಮಾಡಬಾರದು 20 ಅಡಿಗಳಷ್ಟಾದರೂ ನೀರನ್ನು ಉಳಿಸಬೇಕು ಇಲ್ಲದಿದ್ದಲ್ಲಿ ಮಳೆಗಾಲದ ನಂತರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೆಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಚ್.ಕೆ.ಅಜ್ಜಯ್ಯ, ಉಪಾಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಜಯಾನಾಯಕ್, ನಿರ್ದೇಶಕ, ನ್ಯಾಯವಾದಿ ಎಸ್.ಕೆ.ಜಗದೀಶ್, ಶಿವಮೂರ್ತಿ ನಾಯಕ್, ಮಜೀದ್, ಕೆ.ವೆಂಕಟೇಶ್, ಮುರುಗೇಶ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News