ಮಹಿಳೆಯ ಅಸ್ಮಿತೆ ಜಾಗೃತವಾಗಲಿ: ಪೌರಾಯುಕ್ತೆ
ಚಿಕ್ಕಮಗಳೂರು, ಡಿ.5: ಮಹಿಳೆಯ ಅಸ್ಮಿತೆ ಜಾಗೃತವಾಗಿರಬೇಕು. ಮಹಿಳೆ ಸೂಕ್ಷ್ಮಗ್ರಹಿತ್ವದ ಸೃಷ್ಟಿಕರ್ತೆ ಎಂದು ಚಿಕ್ಕಮಗಳೂರು ಪೌರಾಯುಕ್ತೆ ತುಷಾರಮಣಿ ಅಭಿಪ್ರಾಯಪಟ್ಟಿದ್ದಾರೆ.
ಅಕ್ಕಮಹಾದೇವಿ ಮಹಿಳಾಸಂಘ ಬಸವನಹಳ್ಳಿ ಬಡಾವಣೆಯ ಶರಣೆ ಗಂಗಾಂಬಿಕೆ ತಂಡವು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹೊಸ್ತಿಲ ಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನೆ, ಊರು, ರಾಜ್ಯ, ದೇಶವನ್ನು ಸುಂದರವಾಗಿಸುವ ಶಕ್ತಿಸಾಮರ್ಥ್ಯ ಮಹಿಳೆಯರಿಗಿದೆ. ತಾಯಿಯ ಪ್ರೀತಿ ಹಾಗೂ ಸ್ಫೂರ್ತಿ ಯಶಸ್ಸಿಗೆ ಕಾರಣವಾಗುತ್ತದೆ. ಪ್ರೀತಿ-ವಿಶ್ವಾಸವನ್ನು ಕೇವಲ ಹಣದಿಂದ ಪಡೆಯಲು ಸಾಧ್ಯವಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಶೇ.50ರಷ್ಟು ಅವಕಾಶಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಸಮಾನ ಅವಕಾಶಗಳನ್ನು ಹೊಂದಬಹುದು ಎಂದರು. ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಕಲಿಸುವ ಮೂಲಕ ಜವಾಬ್ದಾರಿಯುತ ಪ್ರಜೆಗಳ ನಿರ್ಮಾಣದಲ್ಲಿ ಮಹಿಳೆಯರು ಪ್ರಮುಖಪಾತ್ರ ವಹಿಸುತ್ತಾರೆ. ತಾಳ್ಮೆ, ಸಹನೆ, ಸ್ವಚ್ಛತೆ, ಶಿಸ್ತು, ಸಂಯಮವನ್ನು ಮನೆಯಲ್ಲಿ ಅನುಸರಿಸಿದರೆ ಅದು ದೇಶಕ್ಕೂ ಸಹಕಾರಿ ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ ್ಮಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ವರ್ಣ ಮತ್ತು ಪಾರ್ವತಿ ಪ್ರಾರ್ಥಿಸಿದರು. ಆಶಾ ಹೇಮಂತ್ ಅತಿಥಿಗಳನ್ನು ಪರಿಚಯಿಸಿದರು. ಜಯಾಜಯಣ್ಣ, ನಮ್ರತಾ ಮತ್ತು ಸುಮಾ ತಂಡ ಅಭಿನಯಿಸಿದ ಹೆಣ್ಣಿನಹೃದಯ ರೂಪಕ, ಸುಮಾ ಉಮೇಶ್, ಲತಾ ಜಯಕುಮಾರ್ ತಂಡದ ಜಾನಪದ ನೃತ್ಯ, ಕಮಲಾ ಪ್ರಮೀಳಾ ವಚನಗಾಯನ ಗಮನಸೆಳೆಯಿತು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಚಂದ್ರಮತಿ ಬಹುಮಾನ ವಿತರಿಸಿದರು.
ಪತ್ರಕರ್ತೆ ಸುಮಿತ್ರಾ ಶಾಸ್ತ್ರಿ, ಉಪಾಧ್ಯಕ್ಷೆ ಚಂದ್ರಮತಿ ಚಂದ್ರಶೇಖರ್, ಭಾರತಿ ಶಿವರುದ್ರಪ್ಪ, ರತ್ನಮ್ಮ, ಸುಶೀಲಮ್ಮ ವೇದಿಕೆಯಲ್ಲಿದ್ದರು. ನ್ಯಾಯವಾದಿ ಡಿ.ಎಸ್. ಮಮತಾ ನಿರೂಪಿಸಿದರು. ಶೈಲಾ ಶಿವು ಸ್ವಾಗತಿಸಿದರು. ವೀಣಾ ನೀಲಕಂಠ ವಂದಿಸಿದರು.