ಆಧಾರ್ ಆಧಾರಿತ ಗೊಬ್ಬರ ಖರೀದಿಗೆ ಆತಂಕ ಬೇಡ: ಶಾಸಕ ರಘುಮೂರ್ತಿ
ಚಳ್ಳಕೆರೆ, ಡಿ.5: ಆಧಾರ್ ಕಾರ್ಡ್ ಆಧಾರಿತ ಗೊಬ್ಬರ ಖರೀದಿ ಪ್ರಕ್ರಿಯೆಗೆ ರೈತರು ಆತಂಕ ಗೊಳ್ಳುವ ಅಗತ್ಯವಿಲ್ಲ. ಖರೀದಿ ಮಾಡುವವರ ಗುರುತು ನಿಖರವಾಗಿರಬೇಕು. ಸಬ್ಸಿಡಿ ಹಣ ದುರುಪಯೋಗ ಹಾಗೂ ರೈತರಿಗೆ ಕೃತಕ ಗೊಬ್ಬರ ಅಭಾವ ಸೃಷ್ಟಿ, ಹೆಚ್ಚಿಗೆ ಹಣ ವಸೂಲಿ ತಡೆಗೆ ಸರಕಾರ ಮುಂದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ವಿಶ್ವ ಮಣ್ಣಿನ ದಿನಾರಣೆಗೆ ಬಂದಿದ್ದ ರೈತರಿಗೆ ಪಿಒಎಸ್(ಪಾಯಿಂಟ್ ಆಫ್ ಸೇಲ್) ಯಂತ್ರದ ಮೂಲಕ ರೈತರು ಗೊಬ್ಬರ ಖರೀದಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಸಿಗುವ ಸಬ್ಸಿಡಿ ಹಣ ದುರುಪಯೋಗ ಹಾಗೂ ರಸಗೊಬ್ಬರ ಅಕ್ರಮ ದಾಸ್ತಾನು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಹೊಸ ಯೋಜನೆಗೆ ಸಹಕಾರಿಯಾಗಲಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ. ಮಾರುತಿ ಮಾತನಾಡಿ, ರೈತರು ರಸಗೊಬ್ಬರದ ಅಧಿಕೃತ ಮಾರಾಟಗಾರರಲ್ಲಿ ತಮ್ಮ ಆಧಾರ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಗುರುತನ್ನು ನೀಡಿ ರಸಗೊಬ್ಬರ ಖರೀದಿ ಜನವರಿ 1ರಿಂದ ಜಾರಿಗೆ ಬರಲಿದೆ. ರಸಗೊಬ್ಬರ ಪಡೆಯುವ ರೈತರು ಅಂಗಡಿಗೆ ಹಣದ ಜತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಆಧಾರ್ ನಂಬರ್ ಕೊಟ್ಟು ಹೆಬ್ಬೆಟ್ಟಿನ ಗುರುತು ನೀಡಿದರೆ ಮಾತ್ರ ರಸಗೊಬ್ಬರ ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ರಸಗೊಬ್ಬರ ಅಂಗಡಿ ಮಾಲಕ ಮಂಜುನಾಥ್ ಮಾತನಾಡಿದರು.