ಹೊಳೆಕೂಡಿಗೆ ರಸ್ತೆ ನಿರ್ಮಾಣ: ಶಾಸಕ ನಿಂಗಯ್ಯ ಭರವಸೆ
ಬಣಕಲ್, ಡಿ.5: ಭದ್ರಾ ನದಿಯಲ್ಲಿ ತೆಪ್ಪದ ಪಯಣ ಮಾಡಿ ರಸ್ತೆಯಿಲ್ಲದೆ ವಂಚಿತರಾಗಿರುವ ಕೂವೆ ಗ್ರಾಮದ ಅಮ್ತಿ ಸಮೀಪದ ಆದಿವಾಸಿ ಮಲೆಕುಡಿಯ ಕುಟುಂಬದ ಹೊಳೆಕೂಡಿಗೆ ಗ್ರಾಮಕ್ಕೆ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, 4 ವರ್ಷಗಳಿಂದ ಆದಿವಾಸಿ ಮಲೆಕುಡಿಯ ಕುಟುಂಬಗಳು ಅಮ್ತಿ ಸಮೀಪದ ಹೊಳೆಕೂಡಿಗೆಯಲ್ಲಿ ರಸ್ತೆ ಸಂಪರ್ಕ ಇಲ್ಲದೆ ವಂಚಿತವಾಗಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಕುಟುಂಬವು ತೆಪ್ಪದಲ್ಲಿ ಮಕ್ಕಳನ್ನು ಕೂರಿಸಿ ಶಾಲೆಗೆ ಅಥವಾ ಆಸ್ಪತ್ರೆಗಳಿಗೆ ಹೋಗುವುದಕ್ಕೆ ತುಂಬಾ ಅನಾನುಕೂಲದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಆದ್ದರಿಂದ ದುರಂತಮಯ ತೆಪ್ಪದ ಪಯಣ ನಿಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಭದ್ರಾ ಹೊಳೆಯ ಇಕ್ಕೆಲದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶವಿದೆ. ಈ ಭಾಗಕ್ಕೆ ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ತೋಟದ ಮಾಲಕರ ಜೊತೆ ಮಾತುಕತೆ ನಡೆಸಿ ರಸ್ತೆಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ನಿಧರಿಸಲಾಗುವುದು.
ಈ ಬಗ್ಗೆ ಕೂಡಲೇ ತಹಶೀಲ್ದಾರ್ ಅವರಲ್ಲಿ ಚರ್ಚಿಸಿ ಸ್ಥಳದ ಬಗ್ಗೆ ಮಾಹಿತಿ ಪಡೆದು ರಸ್ತೆ ನಿರ್ಮಾಣಕ್ಕೆ ಸ್ಪಂದಿಸುವುದಾಗಿ ಶಾಸಕರು ಹೇಳಿದರು.
ಶಾಸಕರ ಭೇಟಿಯ ಸಂದರ್ಭದಲ್ಲಿ ಚಿಕ್ಕಮಗಳೂರು ಡಿವೈಎಸ್ಪಿ ತಿಲಕ್‌ಚಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ್ಯ ಬಿ.ಎಸ್.ಲಕ್ಷ್ಮಣ್‌ಗೌಡ, ಜೆಡಿಎಸ್‌ನ ಯುವ ತಾಲೂಕು ಕಾರ್ಯಾಧ್ಯಕ್ಷ ಆದರ್ಶ್ ಬಾಳೂರು, ಆಲ್ದೂರು ಕ್ಷೇತ್ರದ ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಉಪ ತಹಶೀಲ್ದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಸಂತೋಷ್, ಪ.ಪಂಗಡದ ಅಧ್ಯಕ್ಷ ಸುರೇಶ್, ಪ.ಪಂಗಡದ ಮುಖಂಡ ನವೀನ್, ಕೂವೆ ಗ್ರಾಪಂ ಉಪಾಧ್ಯಕ್ಷ್ಯೆ ಶೈಲಮ್ಮ, ಸಚಿನ್, ಸುಬ್ರಾಯಗೌಡ, ಗ್ರಾಮಸ್ಥರಾದ ರುದ್ರಯ್ಯ, ಚಂದ್ರಶೇಖರ್ ಮತ್ತಿತರರಿದ್ದರು.