ಉ.ಪ್ರ. ಸ್ಥಳೀಯಾಡಳಿತ ಚುನಾವಣೆ: ಶೇ.45ರಷ್ಟು ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ನಷ್ಟ

Update: 2017-12-06 05:39 GMT

ಲಕ್ನೋ, ಡಿ.6: ಉತ್ತರ ಪ್ರದೇಶ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಮೋಘ ಜಯ ಸಾಧಿಸಿದೆ ಎಂದು ಎಲ್ಲರೂ ನಂಬಿ ಬಿಟ್ಟಿದ್ದಾರೆ. ಆದರೆ ಇಲ್ಲಿ ಕೆಲವೊಂದು ವಾಸ್ತವಗಳು ಕುತೂಹಲಕಾರಿ. ಬಿಜೆಪಿ ಒಟ್ಟು 2,366 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಆದರೆ 3,656 ಕಡೆಗಳಲ್ಲಿ ಅಂದರೆ ಶೇ.45ರಷ್ಟು ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಒಟ್ಟು 12,644 ಸ್ಥಾನಗಳಿಗೆ ಚುನಾವಣೆ ನಡೆದಿದ್ದರೆ, 8,038 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ನಗರ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ 664 ಅಭ್ಯರ್ಥಿಗಳು ಗೆದ್ದಿದ್ದರೆ, 1,462 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಅದೇ ರೀತಿ ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷದ ಶೇ.54, ಶೇ.66 ಹಾಗೂ ಶೇ.75 ಅಭ್ಯರ್ಥಿಗಳು ಕ್ರಮವಾಗಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಒಟ್ಟಾರೆಯಾಗಿ ಶೇ.30.8 ಆಗಿದ್ದರೆ, ನಗರ ಪಂಚಾಯತ್ ಹಂತದಲ್ಲಿ ಈ ಪ್ರಮಾಣ ಕೇವಲ ಶೇ.11.1 ಆಗಿತ್ತು. ಹದಿನಾರು ಪ್ರಮುಖ ನಗರಗಳಲ್ಲಿ ನಡೆದ ಮೇಯರ್ ಚುನಾವಣೆಗಳಲ್ಲಿ ಕೂಡ ಬಿಜೆಪಿಯ ಮತ ಗಳಿಕೆ ಪ್ರಮಾಣ ಶೇ.41 ಆಗಿದ್ದರೂ ಅದು 2014ರ ಲೋಕಸಭಾ ಚುನಾವಣೆ ಸಂದರ್ಭದ ಮತ ಗಳಿಕೆ ಪ್ರಮಾಣಕ್ಕಿಂತ (48.5) ಬಹಳ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News