ಬಾಬಾ ಬುಡಾನ್‍ಗಿರಿ ಪ್ರಕರಣ: ಕಠಿಣ ಕ್ರಮಕ್ಕೆ ಕೊಡಗು ಮುಸ್ಲಿಂ ಸಮಾಜ ಆಗ್ರಹ

Update: 2017-12-06 12:09 GMT

ಮಡಿಕೇರಿ, ಡಿ. 6: ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್‍ಗಿರಿಯಲ್ಲಿ ಬಜರಂಗದಳ, ವಿಹೆಚ್‍ಪಿ  ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿರುವುದನ್ನು ಕೊಡಗು ಮುಸ್ಲಿಂ ಸಮಾಜ ತೀವೃವಾಗಿ ಖಂಡಿಸುತ್ತದೆ.

   ದತ್ತಮಾಲೆ ಯಾತ್ರೆಯ ಮುಂಚೆಯೇ ಬಜರಂಗದಳದ ನಾಯಕರು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದರೂ, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸದೆ ಜಾಣ ಮೌನವಹಿಸಿ, ಕಿಡಿಗೇಡಿಗಳ ನೇತೃತ್ವದಲ್ಲಿ ಯಾತ್ರೆ ನಡೆಸಲು ಅವಕಾಶ ಮಾಡಿಕೊಟ್ಟ ಪರಿಣಾಮದಿಂದಾಗಿ ಪೂರ್ವಯೋಜಿತ ಕೃತ್ಯ ನಡೆದಿದೆ.

   ಬಾಬಾ ಬುಡಾನ್‍ಗಿರಿಯಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳಿಗೆ ಆಸ್ಪದ ನೀಡದೆ ರಾಜ್ಯದ ಜಾತ್ಯಾತೀತ ಸರಕಾರ ಎಲ್ಲಾ ರೀತಿಯ ರಕ್ಷಣೆ ಒದಗಿಸುವ ಭರವಸೆ ಶಾಂತಿ ಪ್ರಿಯ ಜನತೆಗೆ ಇತ್ತು. ಆದರೆ ಜಾತ್ಯಾತೀತ ಪಕ್ಷದ ಭರವಸೆ ಕೇವಲ ಹುಸಿಯಾಗಿ ಉಳಿದಿದೆ. ಈ ಹಿಂದೆ ಬಾಬರಿ ಮಸೀದಿ ವಿಷಯದಲ್ಲೂ ಸಹ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯತೆಯನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಅಲ್ಲದೆ ಲಿಬ್ರಹಾನ್ ಆಯೋಗದಲ್ಲಿ ಹೆಸರಿಸಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಹ ಯುಪಿಎ ಸರಕಾರದಿಂದ ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮು ಗಲಭೆ ಸೃಷ್ಟಿಸಲು ಸಂಘಪರಿವಾರ ಮತ್ತು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದ್ದು, ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿರುವುದು ದುರಂತವಾಗಿದೆ. ಬಾಬಾ ಬುಡನ್ ಗಿರಿ ಘಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿಹೆಚ್‍ಪಿ ಮತ್ತು ಬಜರಂಗದಳ ನಾಯಕರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೊಡಗು ಮುಸ್ಲಿಂ ಸಮಾಜದ ಕಾರ್ಯಾಧ್ಯಕ್ಷ ಖಾಸಿಂ ಸರಕಾರವನ್ನು ಒತ್ತಾಯಿಸಿದ್ದಾರೆ.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News