ಸಂವಿಧಾನದ ಆಶಯ ಸಾಕಾರಗೊಳಿಸಲು ಸರಕಾರ ಬದ್ಧ: ಮುಖ್ಯಮಂತ್ರಿ

Update: 2017-12-06 12:26 GMT

ಬೆಂಗಳೂರು, ಡಿ. 6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಪ್ರಾಸ್ತಾವಿಕ(ಪ್ರಿಯಂಬಲ್)ದಲ್ಲಿ ನಮೂದಿಸಿರುವ ಆಶಯಗಳನ್ನು ಜಾರಿಗೆ ತರುವಲ್ಲಿ ನಮ್ಮ ಸರಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬುಧವಾರ ಅಂಬೇಡ್ಕರ್ ಅವರ 61ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಅವರ ಆಶಯಗಳನ್ನು ಸಾಕಾರಗೊಳಿಸಲು ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕಾಗಿದೆ. ಸರಕಾರದ ವತಿಯಿಂದ ಗೌರವ ಸಲ್ಲಿಸುವ ಮೂಲಕ ಅವರನ್ನು ಸದಾ ಸ್ಮರಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

 ಹುಣಸೂರಿನಲ್ಲಿ ಆಯೋಜಿಸಲಾಗಿದ್ದ ಹನುಮ ಜಯಂತಿಗೆ ಪೊಲೀಸರು ಮೊದಲೆ ಮಾರ್ಗವನ್ನು ಸೂಚಿಸಿದ್ದರು. ಆದರೂ, ಉದ್ದೇಶಪೂರ್ವಕವಾಗಿ ಸಂಸದ ಪ್ರತಾಪಸಿಂಹ ಗಲಾಟೆ ಮಾಡಿದ್ದಾರೆ. ರಾಜಕೀಯವಾಗಿ ಅವರು ಇನ್ನು ಪ್ರಬುದ್ಧರಾಗಬೇಕು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಚನ್ನಣ್ಣನವರ್ ನಡುವೆ ಮಾತುಕತೆ ನಡೆದಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಅವರಿಬ್ಬರು ಮಾತನಾಡಿರಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಎನ್‌ಎಸ್‌ಯುಐ ವತಿಯಿಂದ ದೂರು ನೀಡಿರುವ ವಿಚಾರದ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಸಂಸದ ಧ್ರುವನಾರಾಯಣ್, ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ದಲಿತ ಮುಖಂಡರುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News