ರಾಜ್ಯದ ಬಿಜೆಪಿ ನಾಯಕರ ವರ್ತನೆ ಐಸಿಸ್ ರೀತಿಯಲ್ಲಿದೆ: ಗೃಹ ಸಚಿವ ರಾಮಲಿಂಗಾರೆಡ್ಡಿ
ದಾವಣಗೆರೆ, ಡಿ. 6: ರಾಜ್ಯದ ಬಿಜೆಪಿ ನಾಯಕರರು ಭಯೋತ್ಪಾದಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಯೋತ್ಪಾದನೆ ಮಾಡುತ್ತಿದ್ದಾರೆ. ಅವರ ವರ್ತನೆಗಳು ಐಸಿಸ್ ರೀತಿಯಲ್ಲಿವೆ. ಅವರಿಗೆಲ್ಲಾ ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಯಕರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡುವುದೇ ಬಿಜೆಪಿಯವರ ಉದ್ದೇಶ. ಇದಕ್ಕಾಗಿಯೇ ಇಲ್ಲದ ಗಲಾಟೆಗಳನ್ನು ಅವರು ಮಾಡುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸರ ಆದೇಶ ಮೀರಿ ಕಾನೂನು ಕೈಗೆತ್ತಿಕೊಳ್ಳುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದ. ಹನುಮ ಜಯಂತಿ ವೇಳೆ ಮೈಸೂರು ಸಂಸದ ಪ್ರತಾಪ್ ಸಿಂಹ ಪೊಲೀಸರು ನಿಗದಿ ಮಾಡಿದ್ದ ಮಾರ್ಗ ಉಲ್ಲಂಘನೆ ಮಾಡಿ ಕಾನೂನು ಮುರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅವರ ಬಂಧನದ ಹಿಂದೆ ಯಾವುದೇ ರಾಜಕೀಯ ಕಾರಣ ಹುಡುಕುವುದು ಬೇಡ ಎಂದರು.