ಬಸ್‍ಗೆ ಬೊಲೆರೋ ಪಿಕಪ್ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
ಹೊನ್ನಾಳಿ, ಡಿ. 6: ಬಸ್ ಓವರ್‍ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‍ಗೆ ಬೊಲೆರೋ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅರಕೆರೆ ಗ್ರಾಮದ ರಾಜ್ಯ ಹೆದ್ದಾರಿ 25ರಲ್ಲಿ ಸಂಭವಿಸಿದೆ.
ತಾಲೂಕಿನ ಚಟ್ನಹಳ್ಳಿ ಗ್ರಾಮದ ದರ್ಶನ್(28) ಮತ್ತು ಹರೀಶ್(25) ಮೃತಪಟ್ಟವರು. ಢಿಕ್ಕಿಯ ರಭಸಕ್ಕೆ ಬೊಲೆರೋ ಪಿಕಪ್ ವಾಹನ ನಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬೊಲೆರೋ ಚಾಲಕ ಆರುಂಡಿಯ ಪ್ರವೀಣ್‍ಕುಮಾರ್, ಚಟ್ನಹಳ್ಳಿಯ ಮಹಂತ್‍ರಾಜ್ ಹಾಗೂ ಪ್ರಹ್ಲಾದ್ ಅವರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಚಟ್ನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಆರುಂಡಿ ಗ್ರಾಮದ ಬೊಲೆರೋ ಪಿಕಪ್ ವಾಹನದಲ್ಲಿ ಹರಿಹರ ತಾಲೂಕಿನ ಗ್ರಾಮವೊಂದಕ್ಕೆ ಅಡಿಕೆ ಕೇಣಿ ಕೆಲಸಕ್ಕೆ ತೆರಳುತ್ತಿದ್ದರು, ಬಸ್ ಬೆಂಗಳೂರಿನಿಂದ ಹರಿಹರ ಮಾರ್ಗವಾಗಿ ಹೊನ್ನಾಳಿಗೆ ಬರುತ್ತಿತ್ತು ಎಂದು ತಿಳಿದುಬಂದಿದೆ.
ಖಾಸಗಿ ಬಸ್ ಚಾಲಕ ಗಂಗಾಧರಯ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.