ಅಕ್ರಮ ಜಾನುವಾರು ಸಾಗಾಟಗಾರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಕಳಸ, ಡಿ.6: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಕ್ಕಿಯಲ್ಲಿ ನಡೆದಿದೆ.
ಸ್ಥಳೀಯ ವ್ಯಕ್ತಿಯಾದ ರಮೇಶ್ ಓಣಿಗಂಡಿ, ಚಿಕ್ಕಮಗಳೂರು ಮೂಲದ ಸಂಪತ್, ಪುಟ್ಟಸ್ವಾಮಿ, ಧನಂಜಯ ಬಂಧಿತ ಆರೋಪಿಗಳು. ಮತ್ತೋರ್ವ ಕಲ್ಮಕ್ಕಿ ನಿವಾಸಿ ವಿಶ್ವನಾಥ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಕಳೆದ ಹಲವಾರು ದಿನಗಳಿಂದ ಇಲ್ಲಿ ನಿರಂತರವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಕಲ್ಮಕ್ಕಿ ಗ್ರಾಮಸ್ಥರಿಗೆ ಅನುಮಾನವಿತ್ತು. ಅದರಂತೆ ಬುಧವಾರದ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಜಾನುವಾರುಗಳನ್ನು ಸಾಗಾಟ ಮಾಡಲುವಾಹನ ಬಂದಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಗ್ರಾಮಸ್ಥರು ಕಲ್ಮಕ್ಕಿಯಲ್ಲಿ ಹೊಂಚು ಹಾಕಿ ಕುಳಿತು ನಂತರ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.
ಬೈಕ್ ಒಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಇದರ ಹಿಂದೆಯೇ ನಾಲ್ಕು ಜಾನುವಾರಗಳನ್ನು ತುಂಬಿಸಿಕೊಂಡು ಪಿಕ್ ಅಪ್ ವಾಹನ ಬಂದಿದ್ದು, ಅದನ್ನು ಅಡ್ಡಗಟ್ಟಿ ಮತ್ತಿಬ್ಬರನ್ನು ಗ್ರಾಮಸ್ಥರು ಹಾಗೂ ಪೊಲೀಸರು ಹಿಡಿದಿದ್ದಾರೆ.ಆರೋಪಿಗಳಿಂದ ನಾಲ್ಕು ಜಾನುವಾರುಗಳು ಸೇರಿದಂತೆ ಒಂದು ಬೈಕ್, ಪಿಕ್ ಅಪ್ ವಾಹನ ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.