ಸಂವಿಧಾನದ ಮೇಲೆ ಸವಾರಿ ನಡೆದರೆ ಪರಿಣಾಮ ನೆಟ್ಟಗಿರಲ್ಲ: ಝಾಕಿರ್ ಹುಸೈನ್

Update: 2017-12-06 17:41 GMT

ಮೂಡಿಗೆರೆ, ಡಿ.6: ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಕೋಮುವಾದಿ ರಾಜಕೀಯ ವ್ಯವಸ್ಥೆ ದೇಶದ ಆಡಳಿತ ಚುಕ್ಕಾಣಿ ಹಿಡಿದು ಅಂಬೇಡ್ಕರ್ ಅವರ ಸಂವಿಧಾನವನ್ನೇ ಗಾಳಿಗೆ ತೂರುವ ಹುನ್ನಾರ ನಡೆಸಿದೆ. ಹಾಗೊಂದು ವೇಳೆ ಸಂವಿಧಾನದ ಮೇಲೆ ಸವಾರಿ ನಡೆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಝಾಕೀರ್ ಹುಸೈನ್ ಹೇಳಿದ್ದಾರೆ.

ಇಲ್ಲಿನ ಬಿಎಸ್ಪಿ ಕಚೇರಿಯಲ್ಲಿ ಬುಧವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 62ನೇ ಪರಿನಿರ್ವಾಣ ಹಾಗೂ ಬಾಬರಿ ಮಸೀದಿ ಧ್ವಂಸ-ಕರಾಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಆದರ್ಶಗಳನ್ನು ಒಪ್ಪಿಕೊಳ್ಳಲು ಕೋಮುವಾದಿ ರಾಜಕೀಯ ವ್ಯವಸ್ಥೆ ತಯಾರಿಲ್ಲ. ಅವದು ಕೋಮುವಾದಿ ನಿಲುವಿನಿಂದ ಭಾರತೀಯ ಸಮವಿಧಾನದ ಆಶಯಗಳನ್ನು ಗಾಳಿಗೆ ತೂರಿ ಷಡ್ಯಂತ್ರದ ಮೂಲಕ ಮಸಲತ್ತು ನಡೆಸಿ ಅಧಿಕಾರದ ಗದ್ದೆಗೆ ಏರಲು ಹವಣಿಸುತ್ತಿದ್ದಾರೆ ಎಂದು ದೂರಿದರು.

ಕೋಮುವಾದಿಗಳು ಮತ್ತು ಜಾತಿ ದೌರ್ಜನ್ಯ ಎಸಗುವ, ಧರ್ಮದ ಅಫೀಮು ಏರಿಸಿಕೊಂಡವರನ್ನು ಈ ದೇಶವನ್ನು ಆಳಲು ಅವಕಾಶ ನೀಡಬಾರದು. ಧರ್ಮದ ಅಮಲು ದೇಶವನ್ನು ಅಂಧಕಾರದಲ್ಲಿ ಮುಳುಗಿಸುವ ಭೀತಿ ಇದೆ. ಸಾಮಾನ್ಯ ಬಡಜನರು ಬದುಕಬೇಕೆಂದರೆ ದೇಶದಲ್ಲಿ ಅಂಬೇಡ್ಕರ್ ಆಶಯದಂತೆ ಸಂವಿಧಾನಬದ್ಧ ಅಧಿಕಾರ ನಡೆಸುವ ಜನರು ಅಧಿಕಾರಕ್ಕೆ ಬರಬೇಕು. ಅದಕ್ಕೆ ಸಾಮಾನ್ಯ ಜನರು ದುರಂಹಕಾರಿ ಕೋಮುವಾದಿಗಳನ್ನು ದೂರ ಇಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಮಾತನಾಡಿ, ಬಾಬರಿ ಮಸೀದಿಯನ್ನು ಕೆಡವಿ ಅಧಿಕಾರಕ್ಕೇರಿದ ಕೋಮುವಾದಿಗಳು ರಾಮಮಂದಿರವನ್ನು ನಿರ್ಮಿಸುವುದಾಗಿ ದೇಶದ ಜನರಿಗೆ ಸುಳ್ಳು ಹೇಳಿ ಕಾಲಹರಣ ಮಾಡುತ್ತಿವೆ. ಇಂತಹ ಸಾವಿರ ಕೋಮುವಾದಿಗಳ ಸರಕಾರ ಅಧಿಕಾರಕ್ಕೆ ಬಂದರೂ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ. ರಾಮಮಂದಿರದ ಹೆಸರಿನಲ್ಲಿ ರಾಜಕಾರಣವಷ್ಟೆ ಅವರಿಗೆ ಬೇಕಾಗಿರುವುದು ಎಂದು ದೂರಿದರು.

ಹಿರಿಯ ಮುಖಂಡ ಯು.ಬಿ. ಮಂಜಯ್ಯ ಮಾತನಾಡಿ, ಅಂಬೇಡ್ಕರ್ ತತ್ವ, ಸಿದ್ಧಾಂತದಡಿಯಲಿ ಬಿಎಸ್ಪಿ ಮುಂದೊಂದು ದಿನ ಅಧಿಕಾರಕ್ಕೆ ಬರಲಿದೆ. ಬಿಎಸ್ಪಿ ಆಡಳಿತಕ್ಕೆ ಬಂದಾಗ ಸಂವಿಧಾನ ಸಮರ್ಪಕವಾಗಿ ಜಾರಿಗೆ ಬರಲಿದೆ. ಎಲ್ಲ ವರ್ಗದ ಜನರನ್ನು ಒಂದುಗೂಡಿಸಿ ಆಡಳಿತ ನಡೆಸಲು ಬಿಎಸ್ಪಿಯಿಂದ ಮಾತ್ರ ಸಾಧ್ಯ ಎಂದರು. ಈ ಸಮಯದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಪಿ.ಕೆ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಬಾಬರಿ ಮಸೀದಿ ಧ್ವಂಸಗೊಳಿಸಿ ಇಂದಿಗೆ 25 ವರ್ಷಗಳಾದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಮುಖಂಡರಾದ ಕೆ.ರಾಮು, ಕಳಸ ಸೋಮಯ್ಯ, ಬಣಕಲ್ ಪರಮೆಶ್, ಸುರೇಶ್, ನಾಗೇಶ್, ಶಬ್ಬೀರ್ ಹುಸೈನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News