ಕಾನೂನು ಕ್ರಮಕ್ಕೆ ಮುಂದಾಗದಿರಲು ಆಸ್ಪತ್ರೆ 25 ಲಕ್ಷ ರೂ. ಆಫರ್ ಮಾಡಿತ್ತು : ಬಾಲಕಿಯ ತಂದೆ ಆರೋಪ

Update: 2017-12-07 08:40 GMT

ಗುರುಗ್ರಾಮ್,ಡಿ.7 : ಇತ್ತೀಚೆಗೆ ಡೆಂಗ್ ಜ್ವರದಿಂದ ಫೋರ್ಟಿಸ್ ಆಸ್ಪತ್ರೆಯಲ್ಲಿ ಏಳು ವರ್ಷದ ಆದ್ಯ ಮೃತಪಟ್ಟ ಹೊರತಾಗಿಯೂ ಆಕೆಯ ಕುಟುಂಬಕ್ಕೆ  ರೂ.18 ಲಕ್ಷ ಬಿಲ್  ವಿಧಿಸಿದ  ಪ್ರಕರಣ ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗಿರುವಂತೆಯೇ ಬಾಲಕಿಯ ತಂದೆ ಜಯಂತ್ ಸಿಂಗ್ ಸ್ಫೋಟಕ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ.  ತಾನು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಬಾರದೆಂದು ಕೋರಿ ಆಸ್ಪತ್ರೆಯ ಆಡಳಿತ ತನಗೆ ರೂ. 25 ಲಕ್ಷ ಆಫರ್ ಮಾಡಿತ್ತು ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ಆಸ್ಪತ್ರೆಯ ಕೆಲ ಹಿರಿಯಾಧಿಕಾರಿಗಳು ತನ್ನ ಮಗಳ ಬಿಲ್ ಪಾವತಿಸುವುದಾಗಿ ಹೇಳಿದರಲ್ಲದೆ  ಸದ್ಯ ಈ ಘಟನೆಯ ವಿರುದ್ಧ ನಡೆಯುತ್ತಿರುವ ಸಾಮಾಜಿಕ ಜಾಲತಾಣ ಅಭಿಯಾನವನ್ನು ನಿಲ್ಲಿಸಲು ರೂ. 25 ಲಕ್ಷ ಆಫರ್ ಮಾಡಿದ್ದಾರೆ ಎಂದು ಸಿಂಗ್ ಹೇಳಿಕೊಂಡಿದ್ದಾರೆ.

"ಫೋರ್ಟಿಸ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ನನ್ನನ್ನು ಭೇಟಿಯಾಗಿ ರೂ 10,37,889/- ಮೊತ್ತದ ಚೆಕ್ ನೀಡಿ ನಾವು ನೀಡಿದ್ದ ಹಣವನ್ನು ಮತ್ತೆ  ಹಿಂದಿರುಗಿಸಿದ್ದಾರೆ. ಇದರ ಹೊರತಾಗಿ ರೂ. 25  ಲಕ್ಷ ನೀಡುವುದಾಗಿ ಹಾಗೂ ಇದಕ್ಕಾಗಿ ಕಾನೂನು ಒಪ್ಪಂದವೊಂದಕ್ಕೆ ಸಹಿ ಹಾಕಬೇಕೆಂದು ಹಾಗೂ ನ್ಯಾಯಾಲಯದ ಮೊರೆ ಹೋಗಬಾರದೆಂದೂ ತಿಳಿಸಲಾಯಿತು,'' ಎಂದು ಅವರು ಹೇಳಿದ್ದಾರೆ.

ಡೆಂಗ್ ಜ್ವರದಿಂದ ಬಾಧಿತಳಾಗಿದ್ದ ಆದ್ಯಳನ್ನು ಆಸ್ಪತ್ರೆಗೆ ದಾಖಲಿಸಿದಂದಿನಿಂದ ಆಕೆಯನ್ನು ವೆಂಟಿಲೇಟರಿನಲ್ಲಿಡಲಾಗಿತ್ತಲ್ಲದೆ 15 ದಿನಗಳ ಕಾಲ ಪ್ರತಿ ದಿನಕ್ಕೆ ರೂ. 1 ಲಕ್ಷಕ್ಕಿಂತಲೂ ಅಧಿಕ ಬಿಲ್ ನಮೂದಿಸಲಾಗಿತ್ತು. ಆಕೆಯನ್ನು ಗುಣಪಡಿಸಲು ಸಾಧ್ಯವಿಲ್ಲವೆಂಬುದನ್ನು ಅರಿತಿದ್ದರೂ ಆಸ್ಪತ್ರೆ ಆಕೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಿತ್ತು ಎಂದು ಸಿಂಗ್ ಆರೋಪಿಸಿದ್ದಾರೆ. ಗರ್ಭಿಣಿಯಾಗಿದ್ದ ಆದ್ಯಳ ತಾಯಿ ಆಕೆಯ ಸಾವಿನ ಸುದ್ದಿಗೆ ಕಂಗಾಲಾಗಿ ಗರ್ಭಪಾತಕ್ಕೂ ಒಳಗಾಗಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News