ಕಾಳುಮೆಣಸು ಕನಿಷ್ಟ ಆಮದು ಬೆಲೆ 500 ರೂ. ನಿಗದಿ: ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ

Update: 2017-12-07 11:19 GMT

ಚಿಕ್ಕಮಗಳೂರು, ಡಿ.7: ಕಾಳುಮೆಣಸಿನ ಕನಿಷ್ಟ ಆಮದು ಬೆಲೆಯನ್ನು 500 ರೂ.ಗಳಿಗೆ ನಿಗದಿಪಡಿಸಿ ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಬೆಳಗಾರರಾದ ಕೆಂಜಿಗೆ ಕೇಶವ್ ಮತ್ತಿತರರು ತಿಳಿಸಿದ್ದಾರೆ.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕಾಳುಮೆಣಸಿನ ಆಮದು ಬೆಲೆಯನ್ನು ಕನಿಷ್ಟ 500 ರೂ.ಗಳಿಗೆ ನಿಗದಿಪಡಿಸಿ ಬೆಳೆಗಾರರ ಹಿತರಕ್ಷಣೆ ಮಾಡಬೇಕೆಂಬ ಸಾಂಬಾರ ಮಂಡಳಿಯ ಪ್ರಸ್ತಾವನೆಯನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ತಕ್ಷಣಕ್ಕೆ ಜಾರಿ ಬರುವಂತೆ ಆಮದು ದರವನ್ನು 500 ರೂ.ಗಳಿಗೆ ನಿಗದಿಪಡಿಸಿದೆ. ವಿದೇಶಗಳಿಂದ ಕನಿಷ್ಟ ಬೆಲೆಗೆ  ಕಳಪೆ ಗುಣಮಟ್ಟದ ಕಾಳುಮೆಣಸು ದೇಶೀಯ ಮಾರುಕಟ್ಟೆ ಪ್ರವೇಶಿಸಿದೆ. ಇದರಿಂದ ಕಾಳುಮೆಣಸಿನ ಬೆಲೆ ಶೇ.35ರಷ್ಟು ಕುಸಿತ ಕಂಡಿದೆ.

ಇದರಿಂದ  ಕಾಳುಮೆಣಸು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಕಾಳುಮೆಣಸು ಬೆಳೆಯುವ ಏಷ್ಯಾದ ಕೆಲವು ದೇಶಗಳು ಶ್ರೀಲಂಕಾದ ಮೂಲಕ ಭಾರತಕ್ಕೆ ತಮ್ಮ  ಮೆಣಸನ್ನು ರಫ್ತು ಮಾಡುವ ಮೂಲಕ ಭಾರತದ ಕಾಳುಮೆಣಸು ಮಾರುಕಟ್ಟೆಯನ್ನು ಹಾಳು ಮಾಡುತ್ತಿದ್ದವು. ಭಾರತ ಸರ್ಕಾರ ಶ್ರೀಲಂಕಾ ದೇಶದಿಂದ ಭಾರತಕ್ಕೆ ರಫ್ತಾಗುವ ವಸ್ತುಗಳ ಮೇಲೆ ನೀಡುತ್ತಿದ್ದ ರಿಯಾಯಿತಿ ಆಮದು ಶುಲ್ಕವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಏಷ್ಯಾದ ಕಾಳು ಮೆಣಸು ರಫ್ತುದಾರರು ಕಡಿಮೆ ಬೆಲೆಗೆ ಭಾರತಕ್ಕೆ ಮೆಣಸನ್ನು ರಫ್ತು ಮಾಡಿ ಭಾರತದ ಉತ್ತಮ ಗುಣ ಮಟ್ಟದ ಕಾಳುಮೆಣಸು ಬೆಲೆ ಕನಿಷ್ಟ ಮಟ್ಟಕ್ಕೆ ಕುಸಿಯಲು ಕಾರಣಕರ್ತರಾಗಿದ್ದರು.

ಇದರಿಂದ ಕಂಗಾಲಾಗಿದ್ದ ಭಾರತದ ಕಾಳುಮೆಣಸು ಬೆಳೆಗಾರರು ಮತ್ತು ಬೆಳೆಗಾರರ ಸಂಘಟನೆಗಳು ವಿದೇಶದಿಂದ ಆಮದಾಗುವ ಕಾಳು ಮೆಣಸಿಗೆ ಗರಿಷ್ಟ ಬೆಲೆ ನಿಗಧಿಪಡಿಸಬೇಕು. ಭಾರತೀಯ ಬೆಳೆಗಾರರ ಹಿತರಕ್ಷಣೆ ಮಾಡುವ ಮೂಲಕ ಉತ್ತಮ ಗುಣಮಟ್ಟ ಹೊಂದಿರುವ ನಮ್ಮ ಕಾಳುಮೆಣಸಿಗೆ ಗರಿಷ್ಟ ಬೆಲೆ ಸಿಗುವಂತೆ ಮಾಡಬೇಕೆಂದು ಸತತವಾಗಿ ಕೇಂದ್ರ ಸರ್ಕಾರವನ್ನು ಕೆಜಿಎಫ್, ಕೆಪಿಎ ಹಾಗೂ ಬ್ಲಾಕ್ ಗೋಲ್ಡ್‍ಲೀಗ್ ಪದಾಧಿಕಾರಿಗಳು ಕೇಂದ್ರ ವಾಣಿಜ್ಯ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಇದೆಲ್ಲವನ್ನು ಪರಿಗಣಿಸಿದ ಕೇಂದ್ರ ವಾಣಿಜ್ಯ ಸಚಿವಾಲಯ ಕಾಳುಮೆಣಸು ಆಮದಿನ ಕನಿಷ್ಟ ಬೆಲೆಯನ್ನು  500 ರೂ.ಗಳಿಗೆ ನಿಗಧಿಪಡಿಸಿ ಆದೇಶ ಹೊರಡಿಸಿದೆ. 700 ರೂ.ಗಳ ಆಸುಪಾಸಿನಲ್ಲಿದ್ದ  ಕಾಳುಮೆಣಸಿನ ಬೆಲೆ ದಿಡೀರಾಗಿ 350 ರಿಂದ 400 ರೂ.ಗಳಿಗೆ ಕುಸಿತ ಕಂಡಿದ್ದು ಈಗ ಆಮದಿನ ಮೇಲೆ  ನಿರ್ಬಂಧ ವಿಧಿಸಿ 500 ರೂ. ನಿಗಧಿ ಪಡಿಸಿರುವುದರಿಂದ ಕಾಳುಮೆಣಸಿನ ಬೆಲೆ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಮೂಡಿದೆ.

ಕಾಳುಮೆಣಸು ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಕೇಂದ್ರ  ವಾಣಿಜ್ಯ ಸಚಿವರು ಮತ್ತು ಇದಕ್ಕಾಗಿ  ಸಹಕರಿಸಿದ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಅಡಿಕೆಗೆ ಆಮದು ಬೆಲೆ ನಿಗಧಿ: ಕಾಳುಮೆಣಸಿನಂತೆ ಅಡಿಕೆ ಸಹ ಬೇರೆ ದೇಶಗಳಿಂದ ರಿಯಾಯಿತಿ ಶುಲ್ಕವನ್ನು ದುರುಪಯೋಗ ಮಾಡಿಕೊಂಡು 162 ರೂ. ಬೆಲೆಯಲ್ಲಿ ಆಮದಾಗುತ್ತಿದ್ದು ಅದನ್ನು ಸಹ ಪರಿಷ್ಕರಿಸಿರುವ ಕೇಂದ್ರ ವಾಣಿಜ್ಯ ಸಚಿವಾಲಯ  ಅಡಿಕೆಗೆ ಕಿ.ಲೋ 1ಕ್ಕೆ 250 ರೂ.  ಆಮದು ಬೆಲೆಯನ್ನು ನಿಗಧಿಪಡಿಸಿ ಆದೇಶ ಹೊರಡಿಸಿದೆ. ಇದು ಅಡಿಕೆಗೆ ಉತ್ತಮ ಬೆಲೆ ಸಿಗಲು ನೆರವಾಗುವುದು ಎಂದು ಬೆಳೆಗಾರರು ಮತ್ತು ಇದರ ಪರ ಹೋರಾಟ ನಡೆಸಿದ ಸಂಘಟನೆಯ ಮುಖಂಡರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News