×
Ad

ಉದ್ಯೋಗ ಮೇಳಗಳಲ್ಲಿ ಭಾಗವಹಿಸುವುದರಿಂದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಹೆಚ್ಚಿನ ಅನುಕೂಲ : ಮಧು ಬಂಗಾರಪ್ಪ

Update: 2017-12-07 17:51 IST

ಸೊರಬ,ಡಿ.7: ಉದ್ಯೋಗ ಮೇಳಗಳಲ್ಲಿ ಭಾಗವಹಿಸುವುದರಿಂದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.

ಪಟ್ಟಣದ ರಂಗಮಂದಿರದಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕೌಶಲ್ಯ ತರಬೇತಿಗಾಗಿ ಅಭ್ಯರ್ಥಿಗಳನ್ನು ಒಗ್ಗೂಡಿಸುವಿಕೆ ಮತ್ತು ಉದ್ಯೋಗ ಸಮಾಲೋಚನೆ ಮೇಳ, ವಿಕಲ ಚೇತನರ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಸಂಖೆಯಲ್ಲಿ ವಿಧ್ಯಾವಂತ ನಿರುದ್ಯೋಗಿಗಳಿದ್ದಾರೆ. ಅಂತಹವರನ್ನು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ನಿರುದ್ಯೋಗಿ ವಿದ್ಯಾವಂತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಮುಂದಾಗಬೇಕು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲು ಬೇಕಾಗಿರುವ ಕೌಶಲ್ಯಗಳನ್ನು ಪಡೆಯುವಲ್ಲಿ ಸರ್ಕಾರದ ಚಿಂತನೆ ವಿಶೇಷವಾಗಿದೆ ಎಂದರು.

ತಾ.ಪಂ. ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಮಾತನಾಡಿ ಪ್ರಸ್ತುತ ಯುವಕರಿಗೆ ಉದ್ಯೋಗ ಅತೀ ಅವಶ್ಯಕವಾಗಿದೆ. ಅರ್ಹ ವಿದ್ಯಾವಂತರಿದ್ದರೂ ಆರ್ಥಿಕ ಸಂಕಷ್ಟ, ಬಡತನದಲ್ಲಿ ಜೀವನ ನಡೆಸುವಂತಾಗಿದೆ. ಮಹಿಳಾ ಸಬಲೀಕರಣದಿಂದ ದೇಶ ಸಬಲತೆ ಹೊಂದಲು ಸಾಧ್ಯ.

ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದ ಅವರು, ವಿಕಲ ಚೇತನರಿಗಾಗಿ ಜಿಲ್ಲೆಗೊಂದು ಪ್ರತ್ಯೇಕ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಬೇಕೆಂದರು.

ಈ ಸಂದರ್ಭದಲ್ಲಿ ಜಿಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ತಾಪಂ. ಇಒ ಕೆ. ಮಂಜುನಾಥ್, ತಾಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಒಡೆಯರ್, ಸದಸ್ಯರಾದ  ನಾಗರಾಜ್ ಚಿಕ್ಕಸವಿ, ಲತಾ ಸುರೇಶ್, ಎಪಿಎಂಸಿ ಅಧ್ಯಕ್ಷ ರಾಜು ಕುಪಗಡ್ಡೆ, ಕಾಫಿ ಡೇ ಪ್ರತಿನಿಧಿ ಗಣೇಶ್, ನರಸಿಂಹ ಮೂರ್ತಿ, ವಿನಾಯಕ ಹೆಗಡೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News