ಡಿ.16,17ರಂದು ಗಾಜಿನ ಮನೆಯಲ್ಲಿ ಸಿರಿಧಾನ್ಯ ಮೇಳ : ಸಿಇಒ ಕೆ.ಜಿ.ಶಾಂತರಾಮ
ತುಮಕೂರು,ಡಿ.07:ಸಾರ್ವಜನಿಕರಲ್ಲಿ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳವನ್ನು ಡಿ.16, 17ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ ತಿಳಿಸಿದ್ದಾರೆ.
ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿರಿಧಾನ್ಯಗಳು ಪಾರಂಪರಿಕ ಬೆಳೆಯಾಗಿದ್ದು,ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಿರಿಧಾನ್ಯದ ಬಗ್ಗೆ ಹಾಗೂ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಮೇಳವನ್ನು ಡಿಸೆಂಬರ್ 16,17ರಂದು ಅಮಾನಿಕೆರೆಯ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ ಎಂದರು.
ಗ್ರಾಹಕರು ಹಾಗೂ ಸಿರಿಧಾನ್ಯ ಬೆಳೆಗಾರರನ್ನು ನಡುವೆ ಸಂಪರ್ಕವನ್ನು ಏರ್ಪಡಿಸುವ ನಿಟ್ಟಿನಲ್ಲಿ ಈ ಮೇಳ ಸಹಕಾರಿಯಾಗಲಿದ್ದು, ಸಾರ್ವಜನಿಕರು ಸಿರಿಧಾನ್ಯ ಮೇಳದ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಹೊಂದುವಂತೆ ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ಡಾ.ರೂಪಾದೇವಿ ಮಾತನಾಡಿ,ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ,ಗೃಹಿಣಿಯರಿಗೆ, ರೈತ, ರೈತ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಮಹತ್ವವನ್ನು ತಿಳಿಸಲಾಗುತ್ತಿದೆ.ಮೇಳಕ್ಕೆ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಡಿಸೆಂಬರ್ 14ರಂದು ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ “ಸಾವಯವ ನಡಿಗೆ” ಅಭಿಯಾನವನ್ನು ಬೆಳಗ್ಗೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಈ ನಡಿಗೆ ಕಾಲೇಜು ಮೈದಾನದಿಂದ ಎಸ್.ಎಸ್.ಪುರಂ ಮಾರ್ಗವಾಗಿ ಎಸ್‍ಐಟಿ, ಶಿವಕುಮಾರ್‍ಸ್ವಾಮೀಜಿ ಸರ್ಕಲ್ ಮೂಲಕ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳಲಿದೆ ತಿಳಿಸಿದರು.
ತುಮಕೂರು ಜಿಲ್ಲೆ ಸಿರಿಧಾನ್ಯಗಳ ಕಣಜವಾಗಿದ್ದು, 9 ಸಿರಿಧಾನ್ಯಗಳಲ್ಲಿ 8 ಸಿರಿಧಾನ್ಯಗಳನ್ನು ಜಿಲ್ಲೆಯಲ್ಲಿ ರೈತರು ಇಂದಿಗೂ ಬೆಳೆಯುತ್ತಾರೆ.ಅತಿಹೆಚ್ಚು ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆಗೊಂಡಿದ್ದು,ರಾಜ್ಯದಲ್ಲಿ ತುಮಕೂರು ಮೊದಲ ಸ್ಥಾನದಲ್ಲಿದೆ. ಜೀವನಾಧಾರವಾಗಿರುವ ಸಾವಯವ ಕೃಷಿಯಿಂದ ಆಗುವ ಅನುಕೂಲ ಹಾಗೂ ಅರಿವು ಮೂಡಿಸಲು ಈ ಮೇಳ ಸಹಕಾರಿಯಾಗಲಿದೆ ಎಂದು ಡಾ.ರೂಪಾದೇವಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕೃಷಿ ಉಪ ನಿರ್ದೇಶಕ ರಮೇಶ್, ತುಮಕೂರು ಜಿಲ್ಲೆ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು,ಉಪಾಧ್ಯಕ್ಷರಾದ ಎ.ಎಸ್.ಚಂದ್ರಶೇಖರಯ್ಯ, ನಿರ್ದೇಶಕರಾದ ಪ್ರಕಾಶ್ ಮತ್ತಿತರು ಉಪಸ್ಥಿತರಿದ್ದರು.