×
Ad

ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್.ಐ.ಆರ್ : ಡಾ.ಬಿ.ಜೆ.ವಿಜಯಕುಮಾರ್

Update: 2017-12-07 19:26 IST

ಮೈಸೂರು,ಡಿ.7: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್  ದಾಖಲಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾಷಣದಲ್ಲಿ ವೈಯುಕ್ತಿಕವಾಗಿ ಸಿದ್ದರಾಮಯ್ಯನವರನ್ನು ಟೀಕಿಸುವ ವೇಳೆ ಸಂವಿಧಾನಿಕ ಸ್ಥಾನವಾದ ಸಿಎಂ ಹುದ್ದೆಯೂ ಒಳಗೊಂಡಂತೆ ಮಾತನಾಡಿರುವುದು ಕೇವಲ ವೈಯುಕ್ತಿಕ ತೇಜೋವಧೆಯಾಗದೆ ಇದೊಂದು ಸಂವಿಧಾನಿಕ ಸ್ಥಾನವನ್ನು ಅಗೌರವಿಸಿದಂತಾಗಿದ್ದು, ಈ ಸಂಬಂಧ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯನವರ ವಿರುದ್ಧ ಅಸಂವಿಧಾನಿಕ ಅವಾಚ್ಯ ಪದಗಳ ಮೂಲಕ ನಿಂದಿಸಿ ಅಪಮಾನವೆಸಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು  ತೇಜೋವಧೆ ಮಾಡಿದ ಆರೋಪದ ಮೇಲೆ ಈ ಮೊದಲು ತಾವು ಠಾಣೆಗೆ ದೂರು ನೀಡಲು ಹೋಗಿದ್ದಾಗ ಕೇವಲ ಹಿಂಬರಹ ನೀಡಿ ನಿರಾಕರಿಸಿದರು. ಈ ಬಳಿಕ ನ್ಯಾಯಾಲಯದ ಮೊರೆ ಹೋಗಿ ಮನವರಿಕೆ ಮಾಡಿಕೊಟ್ಟು ದೂರು ದಾಖಲಿಸಿಕೊಳ್ಳಲು ಸೂಚಿಸುವ ಆದೇಶವನ್ನು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿಯಿಂದ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಡಿ.5ರಂದು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಇದೊಂದು ಜಾಮೀನು ರಹಿತ ಕೇಸ್ ಆಗಿದ್ದು, ಸಚಿವರನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದಾಗಿದ್ದು ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕೆಂದು ಒತ್ತಾಯಿಸಿದರು.

ದೇಶದ ಕಾನೂನಿಗೆ ವಿರುದ್ಧವಾಗಿ ನಡೆಯುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಅನಂತ ಕುಮಾರ್ ಹೆಗಡೆ ಅವರು ಅಸಂವಿಧಾನಿಕವಾಗಿ ನಡೆಯುತ್ತಿರುವುದು ತೀವ್ರ ಖಂಡನೀಯ, ಅಲ್ಲದೇ ಕೇಂದ್ರ ಸಚಿವರಾಗಿ ದೇಶದಾದ್ಯಂತ ಸಂಚರಿಸುತ್ತಾ ಧರ್ಮದ ಜಾತಿಯ ಹೆಸರಿನಲ್ಲಿ ಕೋಮುದಳ್ಳುರಿಗೆ ಎಡೆ ಮಾಡುವಂತಹ ಭಾಷಣ ಮಾಡುವುದನ್ನು ತಕ್ಷಣವೇ ನಿಲ್ಲಬೇಕು ಇಲ್ಲವೇ ಕಾಂಗ್ರೆಸ್ ವತಿಯಿಂದ  ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲ ಪಾಳ್ಯ ಸುರೇಶ್, ಕೆ.ಆರ್.ನಗರ ಪ್ರಚಾರ ಸಮಿತಿ ಅಧ್ಯಕ್ಷ ಎ.ಜಿ.ಸುಧೀರ್, ಕಾರ್ಯದರ್ಶಿ ಹೆಚ್.ಎಲ್.ಬಸವರಾಜ ನಾಯ್ಕ್, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಉಪಾಧ್ಯಕ್ಷ ಎನ್.ನಂದೀಶ್, ಕಾರ್ಯದರ್ಶಿ ಎನ್.ಕಾಂತರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News