ಸಮಾನತೆ ಚುನಾಯಿತ ಸರಕಾರದ ಜವಾಬ್ದಾರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-12-07 14:34 GMT

ಶಿರಸಿ, ಡಿ.7: ಸಾಮಾಜಿಕ ನ್ಯಾಯವೆಂದರೆ 120 ಕೋಟಿ ಜನರಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗತಕ್ಕಂತಹ, ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುವ, ಗೌರವಿಸುವುದೇ ಪ್ರತಿಯೊಂದು ಚುನಾಯಿತ ಸರಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದಾರೆ.

ನಗರದ ವಿಕಾಸಾಶ್ರಮ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರಕನ್ನಡ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ 150 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮವನ್ನೇ ರಾಜಕಾರಣ ಮಾಡಬಾರದು. ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತೆ ಎಲ್ಲರಿಗೂ ಬದುಕತಕ್ಕಂತಹ ಅವಕಾಶವಿರಬೇಕು. ಎಲ್ಲರಿಗೂ ಅವರವರ ಧರ್ಮಪಾಲನೆ ಮಾಡುವಂತಹ ಅಧಿಕಾರ ಇರಬೇಕು. ಅದನ್ನು ಭಾರತೀಯ ಸಂವಿಧಾನ ಕೊಟ್ಟಿದೆ. ಆದರೆ ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಯಾರೇ ಮಾಡಿದರೂ ಅದು ಸಂವಿಧಾನಕ್ಕೆ ಮಾಡುವ ಅಗೌರವ ಎಂದರು.

ರಾಜ್ಯದಲ್ಲಿ ವಿದ್ಯಾರ್ಥಿಗಳು ಹಣಕಾಸಿನ ಮುಗ್ಗಟ್ಟಿನಿಂದ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು ಎನ್ನುವ ಕಾರಣಕ್ಕಾಗಿ ಒಬ್ಬ ವಿದ್ಯಾರ್ಥಿಗೆ ತಿಂಗಳಿಗೆ 1,500 ರೂ.ನಂತೆ ರಾಜ್ಯಾದ್ಯಂತ ವರ್ಷಕ್ಕೆ 15 ಸಾವಿರ ಕೋಟಿ ರೂ.ನ್ನು ಕೊಡುವಂತಹ ಕೆಲಸವನ್ನು ಮಾಡಲಾಗಿದೆ. ದೇಶದ ಯಾವುದೇ ರಾಜ್ಯದಲ್ಲೂ ಈ ತರಹದ ಯೋಜನೆ ಜಾರಿಗೆ ಬಂದಿಲ್ಲ ಎಂದು ತಿಳಿಸಿದರು.

ಬಡವರಿಗೆ 7 ಕೆ.ಜಿ ಅಕ್ಕಿ ಉಚಿತವಾಗಿ ನೀಡುವಂತಹ ಯೋಜನೆ ಹಾಗೂ ಕೃಷಿ ಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತಂದ ಸರಕಾರ ನಮ್ಮದು. ಇಂತಹ ಯೋಜನೆಗಳು ದೇಶದಲ್ಲೇ ಮೊದಲು. 1.80 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ಒದಗಿಸಲಾಗಿದೆ. 1.2 ಕೋಟಿ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಶೂ ಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೋ ಅಂತಹವರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಕೊಟ್ಟಿತ್ತು. ಈಗಾಗಲೇ 165 ಭರವಸೆಗಳನ್ನೂ ರಾಜ್ಯ ಕಾಂಗ್ರೆಸ್ ಸರಕಾರ ಈಡೇರಿಸಿದೆ. ಅದಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಸರಕಾರ ನೀಡಿದೆ. ರಾಜ್ಯದ ಅಭಿವೃದ್ಧಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ. ನಮ್ಮದು ನುಡಿದಂತೆ ನಡೆದ ಸರಕಾರ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಕೋಮು-ಸೌಹಾರ್ದ ಕೆಡಿಸಲು ಬಂದವರಿಗೆ ತಕ್ಕ ಶಾಸ್ತಿ ಮಾಡುವ ದೃಢ ನಿರ್ಧಾರವನ್ನು ಸರಕಾರ ಕೈಗೊಂಡಿದೆ. ರಾಜ್ಯಾಂಗದ ಮೂಲ ಉದ್ದೇಶಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಹಿಸಿದ್ದರು. ಭಟ್ಕಳ ಶಾಸಕ ಮಾಂಕಾಳ್ ವೈದ್ಯ, ಕಾರವಾರ ಶಾಸಕ ಸತೀಶ್ ಸೈಲ್, ಕುಮಟಾ ಶಾಸಕಿ ಶಾರದಾ ಶೆಟ್ಟಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ವಾಗತಿಸಿದರು. ವಿ.ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ರಾಜಕಾರಣಿಗಳು ಬಳಸತಕ್ಕಂತಹ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. ಕೆಲವರು ಕೆಟ್ಟ ಭಾಷೆ ಬಳಸಿದರೆ ತಮ್ಮನ್ನು ಜನರು ದೊಡ್ಡವರು ಅಂದುಕೊಳ್ಳುತ್ತಾರೆ ಎಂದು ಭಾವಿಸಿದ್ದಾರೆ. ಅದು ಅವರ ಮೂರ್ಖತನ. ಯಾರು ಕೆಟ್ಟ ಭಾಷೆ ಬಳಸುತ್ತಾರೋ ಜನ ಅವರ ವಿರುದ್ಧವಾಗುತ್ತಾರೆ. ಜನ ಅದನ್ನು ಇಷ್ಟ ಪಡುವುದಿಲ್ಲ. ರಾಜಕಾರಣಕ್ಕೆ ಒಂದು ಸಂಸ್ಕೃತಿ ಇದೆ, ಸಂಸ್ಕಾರ ಇದೆ, ಅದು ಇರಲೇಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಿಂದಿನ ಸರಕಾರ ಇದ್ದಾಗ ಏನಾಗಿತ್ತು. ಈಗ ಸಿದ್ದರಾಮಯ್ಯ ಸರಕಾರ ಬಂದಾಗ ಏನಾಗಿದೆ ಎನ್ನುವುದನ್ನು ತುಲನೆ ಮಾಡಲಿ. ಅಭಿವೃದ್ಧಿ ಯುಗ ಪ್ರಾರಂಭವಾಗಿದೆ. ಗಲಾಟೆ ಮಾಡಿ ರಾಜಕೀಯ ಮಾಡಬಾರದು. ಗಲಾಟೆ ಆದರೆ ತೊಂದರೆ ಆಗುವುದು ಅಮಾಯಕರಿಗೆ.
-ಆರ್.ವಿ. ದೇಶಪಾಂಡೆ,ಉಸ್ತುವಾರಿ ಸಚಿವ

‘ಯಾವುದು ಸಬ್‌ಕಾಸಾಥ್ ಸಬ್‌ಕಾ ವಿಕಾಸ್?’
ಒಂದು ಧರ್ಮ-ಜಾತಿಯವರನ್ನು ಹೊರಗಡೆ ಇಟ್ಟು ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎಂದು ಹೇಳುತ್ತಾರೆ. ಯಾವುದು ಸಬ್‌ಕಾ ಸಾಥ್, ಯಾವುದು ಸಬ್‌ಕಾ ವಿಕಾಸ್? ಯಾರನ್ನೂ ಹೊರಗೆ ಇಡದೇ ಎಲ್ಲರನ್ನು ಒಳಗೆ ಸೇರಿಸಿಕೊಳ್ಳುವುದೇ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News