ಗೋರಿ ಭಗ್ನಿಗೊಳಿಸಿರುವ ಕೃತ್ಯ ಖಂಡನೀಯ: ಜಂಶೀದ್ ಖಾನ್
ಚಿಕ್ಕಮಗಳೂರು, ಡಿ.7: ದತ್ತಜಯಂತಿ ದಿನ ನಿಷೇಧಿತ ಪ್ರದೇಶದಕ್ಕೆ ನುಗ್ಗಿ ಗೋರಿ ಭಘ್ನಗೊಳಿಸಿರುವ ಕೃತ್ಯವನ್ನು ಕರ್ನಾಟಕ ರಾಜ್ಯ ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಜಂಶೀದ್ ಖಾನ್ ತಿಳಿಸಿದರು.
ಅವರು ಗುರುವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳು ಹಾಗೂ ಅವರಿಗೆ ಪ್ರಚೋದಿಸಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯ ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು, ದತ್ತಜಯಂತಿ ನೆಪದಲ್ಲಿ ಕಿಡಿಗೇಡಿಗಳು ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆಂದರು.
ದತ್ತ ಜಯಂತಿ ಸಂದರ್ಭದಲ್ಲಿ ಪ್ರತಿವರ್ಷವು ಇಂತಹ ಘಟನೆಗಳು ನಡೆಯುತ್ತಿದ್ದು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಹಾಗೂ ದತ್ತಜಯಂತಿ ಹೆಸರಿನಲ್ಲಿ ಹೊಸ ಹೊಸ ಆಚರಣೆಗಳು ನಡೆಯುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು. ಸುಪ್ರೀಂಕೋರ್ಟ್ ಆದೇಶದಂತೆ 1989ರ ಹಿಂದಿನ ಆಚರಣೆಗೆ ಮಾತ್ರ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮುಂದಿನ ಮೂರು ತಿಂಗಳಲ್ಲಿ ಉರೂಸ್ ಆಚರಣೆ ನಡೆಯಲಿದ್ದು, ಶಾಖಾದ್ರಿಯ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.ಸುದ್ಧಿಗೋಷ್ಠಿಯಲ್ಲಿ ಮೌಸಿನ್, ಸಜೀದ್ ಅಹಮದ್, ಸೈಯದ್ ಸಲೀಂಪಾಶ, ಸೇರಿದಂತೆ ಇತರರು ಇದ್ದರು.