×
Ad

ಪತ್ನಿಯನ್ನು ಕೊಂದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

Update: 2017-12-07 21:54 IST

ಬೆಂಗಳೂರು, ಡಿ.7: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೊದಲನೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಚಂದಾಪುರದ ನೆರಳೂರು ನಿವಾಸಿ ಟಿ.ಎಂ. ನಾಗೇಶ್‌ಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಹೈಕೋರ್ಟ್ ಗುರುವಾರ ಅಂತಿಮ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ತಮ್ಮನ್ನು ದೋಷಿ ಎಂಬುದಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಟಿ.ಎಂ.ನಾಗೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು.
     
ಪ್ರಕರಣವೇನು: ಸವಿತಾ ಮತ್ತು ನಾಗೇಶ್ ಇಬ್ಬರು ಪ್ರೀತಿಸಿ 2005ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಗಂಡು ಮಗು ಜನಿಸಿತ್ತು. ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ನಾಗೇಶ್ ಮತ್ತೊಂದು ಮದುವೆಯಾಗಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ದಂಪತಿ ಬೇರ್ಪಟ್ಟಿತ್ತು.

ಸವಿತಾ ತನ್ನ ಸಹೋದರಿ ಜೊತೆಗೆ ಪರಪ್ಪನ ಅಗ್ರಹಾರ ಬಳಿಯ ಚನ್ನಕೇಶವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಈ ಮಧ್ಯೆ 2008ರ ನ.23ರಂದು ಸವಿತಾ ಮನೆಗೆ ಬಂದಿದ್ದ ನಾಗೇಶ್, ಜಗಳ ತೆಗೆದಿದ್ದ. ಇದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸವಿತಾ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದ. ಇದರಿಂದ ಸವಿತಾ ಮೃತ್ತಪಟ್ಟಿದ್ದಳು.

ಸವಿತಾ ಸಹೋದರ ನಂದಕುಮಾರ್ ಅವರು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನಾಯಾಲಯವು 2012ರ ಎಪ್ರಿಲ್‌ನಲ್ಲಿ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸವಿತಾಳನ್ನು ಕೊಲೆ ಮಾಡಿರುವುದು ಸಾಕ್ಷಾಧಾರಗಳ ಸಮೇತ ಸಾಬೀತಾದ್ದರಿಂದ ಹೈಕೋರ್ಟ್‌ಗೆ ನಾಗೇಶ್ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News